ರಿಯಾಜ್ ಫರಂಗಿಪೇಟೆ ಮೇಲೆ ಬಿಜೆಪಿ ಪ್ರೇರಿತ NIA ದಾಳಿ ಖಂಡಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

ಮಂಗಳೂರು : ರಾಜಕೀಯ ಹಗೆತನ ಮುಂದಿಟ್ಟುಕೊಂಡು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರ ನಿವಾಸದ ಮೇಲೆ ಬಿಜೆಪಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ತನಿಖಾ ದಳ ( NIA ) ದಾಳಿ ನಡೆಸಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ದೇರಳಕಟ್ಟೆಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮತ್ತು ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹಿದ್ ಮಲಾರ್ ಮಾತನಾಡಿದರು.

ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ನೇತೃತ್ವ ವಹಿಸಿದ್ದರು.ಬಂಟ್ವಾಳ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ಬಿಸಿ ರೋಡ್ ಕೈಕಂಬದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಹೆಚ್, ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಮಾತನಾಡಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ ಉಪಸ್ಥಿತರಿದ್ದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಗುರುಪುರ ಕೈಕಂಬದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ, ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೊನ್ಸ್ ಫ್ರ್ಯಾಂಕೋ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ಮಾತನಾಡಿದರು. ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಯಾಸೀನ್ ಅರ್ಕುಳ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.