ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ , ಫೆ.4, 5ರಂದು ಯುಎಇ ದುಬೈ, ಅಬುಧಾಬಿಯಲ್ಲಿ ಪ್ರೀಮಿಯರ್ ಪ್ರದರ್ಶನ

ಎನ್‍ಎನ್‍ಎಂ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಿಸಿರುವ ಮಯೂರ್ ಆರ್ ಶೆಟ್ಟಿ ನಿರ್ದೇಶನದ ಪಿಲಿ ತುಳು ಚಲನಚಿತ್ರ ಫೆಬ್ರವರಿ 4, 5ರಂದು ಯುಎಇಯ ದುಬೈ ಮತ್ತು ಅಬುಧಾಬಿಯಲ್ಲಿ ಫ್ರೀಮಿಯರ್ ಪ್ರದರ್ಶನ ಹಾಗೂ ಫೆಬ್ರುವರಿ 10 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ. ಇದರ ಅಂಗವಾಗಿ ಜನವರಿ 22ರಂದು ದುಬೈಯ ಪೋರ್ಚೂನ್ ಏಟ್ರಿಯಂ ಹೋಟೆಲ್ ನಲ್ಲಿ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್ ಕುತ್ತಾರ್ ಅವರು ನಡೆಸಿಕೊಟ್ಟರು. ಗಿರೀಶ್ ನಾರಾಯಣ್ ತಂಡದ ಹುಲಿ ವೇಷ ಕುಣಿತ ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗನ್ನು ನೀಡಿತು.
ಈ ಸಂದರ್ಭದಲ್ಲಿ ನಟ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್, ಚಿತ್ರದ ನಾಯಕ ಭರತ್ ಭಂಡಾರಿ, ನಾಯಕಿ ಸ್ವಾತಿಶೆಟ್ಟಿ ,ನಿರ್ಮಾಪಕರಾದ ಆತ್ಮ ರೈ ,ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಸಂಸ್ಥೆಯ ಮಾಲಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್, ಹರೀಶ್ ಬಂಗೇರ,ಸತೀಶ್ ಪೂಜಾರಿ, ದಿನೇಶ್ ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು. ನೆರೆದಿದ್ದ ಗಣ್ಯರು ಈ ಚಿತ್ರಕ್ಕೆ ನಮ್ಮ ಎಲ್ಲಾ ಸಹಕಾರವನ್ನು ನಾವು ನೀಡುತ್ತೇವೆ ಹಾಗೂ ತುಳು ಚಿತ್ರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಚಿತ್ರವನ್ನು ವೀಕ್ಷಿಸಿ ಚಿತ್ರವನ್ನು ಯಶಸ್ವಿಗೊಳಿಸಲು ವಿನಂತಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಈ ಚಿತ್ರದ ನಿರ್ಮಾಪಕರಾದ ಆತ್ಮರೈಯವರು ನೆರೆದಿದ್ದ ಎಲ್ಲಾ ಅತಿಥಿಗಳಿಗೆ ಹಾಗೂ ತುಳು ಚಿತ್ರ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದರು. ಈ ಚಿತ್ರದ ತಾರಾಗಣದಲ್ಲಿ ವಿಜಯ್‍ಕುಮಾರ್ ಕೊಡಿಯಾಲ್‍ಬೈಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರೆ. ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‍ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.
ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಸುಂದರವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಮಣಿಕಾಂತ್ ಕದ್ರಿಯವರ ಸಂಗೀತ ಸಾರಥ್ಯದಲ್ಲಿ ಅಧ್ಭುತವಾದ ನಾಲ್ಕು ಹಾಡುಗಳಿವೆ.ತುಳುನಾಡಿನ ಕೋಗಿಲೆಗಳ ಗಾಯನ : ಪಟ್ಲ ಸತೀಶ್ ಶೆಟ್ಟಿ, ನಿಹಾಲ್ ತಾವ್ರ್ರೊ ಅನುರಾಧ ಭಟ್, ಕಲಾವತಿ, ಉಜ್ವಲ ಆಚಾರ್, ಮುಂತಾದವರು ಹಾಡಿದ್ದಾರೆ. ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಚಾರ ಕಲೆ ವಿನ್ಯಾಸ ದೇವಿ ರೈಯವರದ್ದಾಗಿದೆ.
