ಬಹುನಿರೀಕ್ಷಿತ ತುಳು ಚಿತ್ರ ಪಿಲಿ, ದುಬೈನಲ್ಲಿ ಸಿನಿಮಾದ ಪ್ರೀಮಿಯರ್ ಪ್ರದರ್ಶನ

ದುಬೈ : ದುಬೈನಲ್ಲಿ “ಪಿಲಿ” ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನವು ಓವರ್ಸೀಸ್ ಮೂವೀಸ್ ಗಲ್ಫ್ ಸಹಯೋಗದಲ್ಲಿ ಪ್ರದರ್ಶನಗೊಂಡಿತು. ದುಬೈ ದೇರಾದ ಹಯಾತ್‍ನಲ್ಲಿರುವ ಗ್ಯಾಲರಿಯ ಸಿನಿಮಾ ಮಂದಿರದಲ್ಲಿ ಹೌಸ್‍ಫುಲ್ ಪ್ರದರ್ಶನ ಕಂಡಿತು. ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ, ಭಾರತದ ಕಬಡ್ಡಿ ತಂಡದ ಆಟಗಾರ ಪ್ರಶಾಂತ್ ರೈ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಕುಮಾರ್ , ಹರೀಶ್ ಬಂಗೇರ, ದಿನೇಶ್ ಶೆಟ್ಟಿ ಕೊಟ್ಟಿಂಜ, ತಾರನಾಥ ರೈ, ಓವರ್ಸೀಸ್ ಮೂವೀಸ್ ಗಲ್ಫ್‍ನ ಸೆಂಥಿಲ್ ಬೆಂಗಳೂರು, ಈಶ್ವರಿದಾಸ್ ಶೆಟ್ಟಿ, ಮಲ್ಲಿಕಾರ್ಜುನ ಗೌಡ ಮೊದಲಾದವರು ದೀಪ ಬೆಳಗಿಸಿ ಪಿಲಿ ಚಿತ್ರಕ್ಕೆ ಶುಭ ಹಾರೈಸಿದರು. ರಾಜೇಶ್ ಕುತ್ತಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಟ ರುಪೇಶ್ ಶೆಟ್ಟಿ ಅವರು ನೀವೆಲ್ಲರೂ ಇಷ್ಟೊಂದು ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸಲು ಬಂದಿರುವುದನ್ನು ನೋಡಿ ಸಂತೋಷವಾಯಿತು.

ಇದೇ ರೀತಿ ಎಲ್ಲಾ ತುಳು ಚಿತ್ರವನ್ನು ನೀವು ಪ್ರೋತ್ಸಾಹಿಸಬೇಕು ಎಂದರು. ನಂತರ ಮಾತನಾಡಿದ ಪ್ರಶಾಂತ್ ರೈ ಅವರು ಈ ಚಿತ್ರಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು. ನಿರ್ಮಾಪಕರಾದ ಆತ್ಮನಂದ ರೈ ಅವರು ಆಗಮಿಸಿದ ಎಲ್ಲಾ ಚಲನಚಿತ್ರ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದರ್ಶನ ವನ್ನು ಆಯೋಜಿಸಲಾಗಿದೆ . ಈ ಚಿತ್ರದ ಯಶಸ್ಸಿಗೆ ಇದೇ ರೀತಿ ನಿಮ್ಮೆಲ್ಲರ ಸಹಕಾರ ನಮಗೆ ಅತ್ಯಗತ್ಯ. ತುಳುನಾಡಿನಾದ್ಯಂತ ಈ ಚಿತ್ರವು ಬರುವ ಫೆಬ್ರವರಿ 10 ರಂದು ಬಿಡುಗಡೆಗೊಳ್ಳಲಿದೆ ಎಂದರು.

ಚಿತ್ರ ವೀಕ್ಷಿಸಿದ ನಂತರ ತಮ್ಮ ಅಭಿಪ್ರಾಯವನ್ನು ವಿ4 ನ್ಯೂಸ್ ನೊಂದಿಗೆ ಹಂಚಿಕೊಂಡ ಅಭಿಮಾನಿಗಳು ಪಿಲಿ ಚಿತ್ರ ಒಂದು ಅದ್ಭುತ ಚಿತ್ರ. ಪಿಲಿ ಕುಣಿತವು ಕೇವಲ ಒಂದು ಕುಣಿತವಲ್ಲ ಇದರ ಹಿಂದೆ ಸಾಂಸ್ಕೃತಿಕ ಮತ್ತು ದೈವಿಕ ಹಿನ್ನೆಲೆ ಇದೆ. ಅದನ್ನು ಈ ಚಿತ್ರದಲ್ಲಿ ಬಹಳ ಅರ್ಥಪೂರ್ಣವಾಗಿ ವಿವರಿಸಿ ಕೊಟ್ಟಿದ್ದಾರೆ. ಕುಟುಂಬ ಸಮೇತವಾಗಿ ಬಂದು ನೋಡುವಂತಹ ಒಂದು ಒಳ್ಳೆಯ ತುಳು ಚಿತ್ರ ಇದಾಗಿದ್ದು, ತುಳು ಚಿತ್ರಭಿಮಾನಿಗಳು ಖಂಡಿತವಾಗಿಯೂ ಈ ಚಿತ್ರವನ್ನು ವೀಕ್ಷಿಸಲೇಬೇಕು. ಈ ಚಿತ್ರವು ಇನ್ನಷ್ಟು ಉತ್ತಮ ಪ್ರದರ್ಶನವನ್ನು ಕಾಣುವುದರಲ್ಲಿ ಸಂಶಯವೇ ಇಲ್ಲ ಎಂದರು.

Related Posts

Leave a Reply

Your email address will not be published.