ಪಿಲಿಕುಳ‌ : ಇರುವೆಗಳಿಂದ ಹಾನಿಗೊಳಗಾಗಿದ್ದ ಹಾವು ಸುರಕ್ಷಿತ

ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಹಾವೊಂದಕ್ಕೆ ಇರುವೆಗಳ ಹಿಂಡು ಕಾಟ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸ್ವತಃ ಪಿಲಿಕುಳದ ನಿರ್ದೇಶಕರೇ ಸ್ಪಷ್ಟನೆ ನೀಡಿದ್ದು, ‘ಇರುವೆಯ ಕಿರುಕುಳಕ್ಕೊಳಗಾಗಿದ್ದ ಹಾವು ಸುರಕ್ಷಿತವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪಿಲಿಕುಳ‌ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮಾತನಾಡಿ ವಿಡಿಯೋ ವೈರಲ್ ಆಗಿರುವ ಬಗ್ಗೆ ನನಗೂ ಮಾಹಿತಿ ಬಂದಿದೆ. ಇರುವೆಗಳು ಮಳೆಗಾಲದಲ್ಲಿ ಸರ್ವೆ ಸಾಮಾನ್ಯ. ಆದರೆ ಹಾವಿಗೆ ಸಮಸ್ಯೆಯಾಗಲು ಪ್ರವಾಸಿಗರು ಎಲ್ಲೆಂದರಲ್ಲಿ ಎಸೆಯುವ ಸಿಹಿತಿಂಡಿಗಳಿಂದ ಆಗಿರುವಂಥದ್ದು. ಅಲ್ಲದೇ,  ಹಾವಿನ ಕೋಣೆಗೆ ಯಾರೋ ಪ್ರವಾಸಿಗರು ಕೂಲ್ ಡ್ರಿಂಕ್ಸ್ ಅನ್ನು ಚೆಲ್ಲಿದ ಪರಿಣಾಮ ಇರುವೆಗಳು ಮುತ್ತಿಕೊಂಡಿದೆ. ಇದು ತಿಳಿದ ಕೂಡಲೇ ಹಾವಿನ ಕೋಣೆಯನ್ನು ಶುಚಿಗೊಳಿಸಲಾಗಿದೆ. ಪ್ರಾಣಿಪಾಲಕರು ಚಿಕಿತ್ಸೆ ನೀಡಿ, ಹಾವಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಹಾವು ಸದ್ಯ ಆರೋಗ್ಯವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಪಿಲಿಕುಳ ನಿಸರ್ಗಧಾಮಕ್ಕೆ ಬರುವ ಪ್ರತಿಯೊಬ್ಬರೂ ತಾವು ಪ್ರಾಣಿ-ಪಕ್ಷಿಗಳನ್ನು ನೋಡಿ ಆನಂದಿಸಬೇಕೆಂದು ಬಯಸುತ್ತಾರೆ. ಆದರೆ ಅವರಲ್ಲಿ ಕೆಲವರು ತಿಂಡಿ ತಿನಿಸುಗಳನ್ನು ಎಸೆಯುವುದು, ಮಲಗಿರುವ ಹುಲಿಗಳು ನಡೆಯುವುದು ನೋಡಬೇಕು ಎಂದು ಹೇಳುತ್ತಾ ಕಲ್ಲೆಸೆಯುವುದು, ಕರಡಿಗಳ ಗೂಡಿಗೆ ಕಲ್ಲೆಸೆದು ಕಿರುಕುಳ ನೀಡುವುದು ಎಲ್ಲ ನಡೆಯುತ್ತಿದೆ. ಈ ರೀತಿಯ ವರ್ತನೆ ಮಾಡಬಾರದು ಎಂದು ಪದೇ ಪದೇ ಹೇಳುತ್ತೇವೆ. ಆದರೂ ಹೆಚ್ಚಿನವರು ಅದನ್ನು ಪಾಲಿಸದ್ದನ್ನು ಕಾಣುವಾಗ ಬೇಸರವಾಗುತ್ತದೆ. ಈಗ ವೈರಲ್ ಆಗಿರುವ ಹಾವಿನ ವಿಡಿಯೋ ಕೂಡ ಪ್ರವಾಸಿಗರು ಎಸೆದ ಸಿಹಿತಿಂಡಿಗಳಿಗೆ ಬಂದ ಇರುವೆಗಳ ಕಾರಣದಿಂದ. ಸಂಸ್ಥೆಯ ಸಿಬ್ಬಂದಿಗಳು ಪ್ರತಿನಿತ್ಯವೂ ಪ್ರಾಣಿಗಳ ಯೋಗಕ್ಷೇಮವನ್ನು ಗಮನಿಸುತ್ತಾರೆ. ಆದ್ದರಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬರುವ ಪ್ರವಾಸಿಗರು, ಅಲ್ಲಲ್ಲಿ ಬರೆದು ಅಂಟಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು” ಎಂದು ಜಯಪ್ರಕಾಶ್ ಭಂಡಾರಿ ಈ ದಿನ.ಕಾಮ್ ಮೂಲಕ ವಿನಂತಿಸಿಕೊಂಡಿದ್ದಾರೆ.

ಪಟ್ಟೆ ಶೀಘ್ರಗಾಮಿ(BANDED LASER) ಎಂಬ ಹಾವಿಗೆ ಇರುವೆಗಳ ಹಿಂಡು ಕಾಟ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಿಲಿಕುಳ ಜೈವಿಕ ಉದ್ಯಾನವನದಲ್ಲಿರುವ ಉರಗಾಲಯದಲ್ಲಿದ್ದ  ಪಟ್ಟೆ ಶೀಘ್ರಗಾಮಿ ಹಾವು (Banded laser snake)ಗೆ, ಇರುವೆಗಳ ಹಿಂಡು ದಾಳಿ ನಡೆಸಿತ್ತು. ಇರುವೆಗಳ ಕಾಟದಿಂದ ಮುಕ್ತವಾಗಲು ಹಾವು ಒದ್ದಾಡುತ್ತಿರುವ ದೃಶ್ಯವನ್ನು ಪ್ರವಾಸಿಗರು ವಿಡಿಯೋ ಮಾಡಿದ್ದರು. ಪಿಲಿಕುಳದ ಸಿಬ್ಬಂದಿಗಳು ‘ಮೇಂಟೆನೆನ್ಸ್ ಮಾಡುತ್ತಿಲ್ಲ’ ಎಂದು ತುಳು ಭಾಷೆಯಲ್ಲಿ ಹೇಳುತ್ತಿರುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿತ್ತು. ಈ ವಿಡಿಯೋ ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.‌ ವಿಡಿಯೋ ವೈರಲಾದ ಹಿನ್ನೆಲೆಯಲ್ಲಿ ನಿರ್ದೇಶಕರು ಈ ಸ್ಪಷ್ಟನೆ ನೀಡಿದ್ದಾರೆ.

Related Posts

Leave a Reply

Your email address will not be published.