ಜ. 22ರಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ

ಮಂಗಳೂರು: “ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಪ್ರಜಾಧ್ವನಿ ಯಾತ್ರೆಯು ಜ.22ರಂದು ಮಂಗಳೂರಿಗೆ ಆಗಮಿಸಲಿದ್ದು ನಗರದ ಕರಾವಳಿ ಮೈದಾನದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಸಮಾಕ್ಷಮದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾಹಿತಿ ನೀಡಿದರು.
ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. “ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿಂದಾಗಿ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದನ್ನು ವಿರೋಧಿಸಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಸರಕಾರದ ಯಾವೊಂದು ಯೋಜನೆಗಳು ಕೂಡ ಬಿಡುಗಡೆಗೊಳ್ಳುತ್ತಿಲ್ಲ. ಸಂಪೂರ್ಣ ನಿಂತುಹೋಗಿದೆ. ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದನ್ನು ಮರೆಮಾಚಿ ರಾಜ್ಯ ಸರಕಾರ ಜನರ ಕಣ್ಣಿಗೆ ಮಣ್ಣೆರಚ್ಚುತ್ತಿದೆ. ಇದನ್ನು ಖಂಡಿಸಲು ಯಾತ್ರೆ ನಡೆಸಲಾಗುತ್ತಿದೆ” ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ರೋಜಿ ಜಾನ್, ಎಂ.ಬಿ. ಪಾಟೀಲ್, ಕೆಪಿಸಿಸಿ ಉಸ್ತುವಾರಿ ಸಲೀಂ ಮುಹಮ್ಮದ್, ಮಧು ಬಂಗಾರಪ್ಪ, ಧ್ರುವ ನಾರಾಯಣ್, ಹೆಚ್. ಕೆ. ಪಾಟೀಲ್ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯ ನವೀನ್ ಡಿಸೋಜ ಉಪಸ್ಥಿತರಿದ್ದರು.
