ಸಂಜೀವ ಮಠಂದೂರು ಅವರನ್ನು ತರಾಟೆಗೆತ್ತಿಕೊಂಡ ಪ್ರವೀಣ್ ಪತ್ನಿ ನೂತನಾ
ಜುಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರ ಮನೆಗೆ ಜು.28ರಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ. ಈ ವೇಳೆ ಪ್ರವೀಣ್ ಪತ್ನಿ ನೂತನಾ ಅವರು ಶಾಸಕರನ್ನು ತರಾಟೆಗೆತ್ತಿಕೊಂಡಿದ್ದಾರೆ. `ನನ್ನ ಗಂಡನ ಕೊಲೆ ಆಗಿ ಎರಡು ದಿನ ಆಯಿತು. ಇವತ್ತು ಬರ್ತೀರಾ, ನಿಮ್ಮ ಮನೆಯ ಮಗಳಿಗೆ ಹೀಗಾದರೆ ಹೀಗೆ ಮಾಡ್ತೀರಾ, ಪಕ್ಷ ಪಕ್ಷ ಪಕ್ಷ ಎಂದು ನನ್ನವರು ಹೇಳುತ್ತಿದ್ದರು. ಸಂಜೀವಣ್ಣನ ಪಿಎಗೆ ಕಾಲ್ ಮಾಡುತ್ತಿದ್ದರು, ಸಾಜ ರಾಧಣ್ಣನಿಗೆ ಕಾಲ್ ಮಾಡುತ್ತಿದ್ದರು, ಅಂಗಾರ ಅಂಗಾರ ಎಂದು ಹೇಳುತ್ತಿದ್ದರು, ನಳಿನ್ ಹಿಂದೆ ಹೋಗುತ್ತಿದ್ದರು. ಈಗ ನಳಿನ್ ಕುಮಾರ್ ಎಲ್ಲಿದ್ದಾರೆ, ಕೊಂದವರನ್ನು ಹಿಡಿದ್ರ. ಪರಿಹಾರ ಚೆಕ್ ಬೇಡ, ಅವರನ್ನು ವಾಪಸ್ ಕರೆ ತರಲು ಸಾಧ್ಯವಿಲ್ಲ ಎಂದು ಗೊತ್ತಿದೆ, ಕೊಂದವರನ್ನು ಹಿಡಿಯಿರಿ, ಬೇರೆಯವರಿಗೆ ಹೀಗೆ ಆಗುವುದು ಬೇಡ ಎಂದು ನೂತನಾ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿದ್ದ ಇತರರೂ ಆಕ್ರೋಶದ ಮಾತುಗಳನ್ನಾಡಿದರು. ಸಂಜೀವ ಮಠಂದೂರು ಜೊತೆಗೆ ನಗರ ಬಿಜೆಪಿ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಜೀವಂಧರ್ ಜೈನ್, ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಪಿ.ಜಿ. ಜಗನ್ನಿವಾಸ್ ರಾವ್ ಮೊದಲಾದವರು ಉಪಸ್ಥಿತರಿದ್ದರು.