ಮತ್ತೆ ನಾಲ್ಕನೆ ಹಂತದಲ್ಲಿ ಗ್ಯಾರಂಟಿಗಳ ಕದನ ಕುತೂಹಲ

ಏಳು ಹಂತಗಳ ಲೋಕ ಸಭಾ ಚುನಾವಣೆಯ ಮೂರು ಹಂತಗಳು ಮುಗಿದಿದ್ದು, ನಾಲ್ಕನೆಯ ಹಂತವೂ ಮುಗಿಯುತ್ತಿದೆ. ಮತ್ತೂ ಮೂರು ಹಂತಗಳು ಮುಂದಿವೆ. ನಾಲ್ಕನೆಯ ಹಂತದಲ್ಲಿ 96 ಕ್ಷೇತ್ರಗಳಿಗೆ ಮತದಾನ ನಡೆಯಿತು. 17.70 ಕೋಟಿ ಮತದಾರರು ಈ ಹಂತದಲ್ಲಿ 1,717 ಅಭ್ಯರ್ಥಿಗಳಲ್ಲಿ 96 ಜನರನ್ನು ಆಯ್ಕೆ ಮಾಡಲು ಮತ ಚಲಾಯಿಸಿದರು.


ಏಪ್ರಿಲ್ 19ರಂದು ಮೊದಲ ಹಂತದಲ್ಲಿ 102 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಏಪ್ರಿಲ್ 26ರ ಎರಡನೆಯ ಹಂತದ ಮತದಾನದಲ್ಲಿ 89 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮೇ 7ರಂದು ನಡೆದ ಮೂರನೆಯ ಹಂತದ ಮತದಾನದಲ್ಲಿ 94 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಏಪ್ರಿಲ್ 26 ಮತ್ತು ಮೇ 7ರ ಎರಡು ಹಂತಗಳಲ್ಲಿ ತಲಾ 14ರಂತೆ ಕರ್ನಾಟಕದ 28 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.


ಇದರಲ್ಲಿ ಮೂರನೆಯ ಹಂತದಲ್ಲಿ ನಡೆಯಬೇಕಿದ್ದ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಮಧ್ಯ ಪ್ರದೇಶದ ಬೇತುಲ್ ಲೋಕ ಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಮರಣಿಸಿದ್ದರಿಂದ ಅಲ್ಲಿ ಎರಡನೆಯ ಹಂತದ ಬದಲು ಮೂರನೆಯ ಹಂತದಲ್ಲಿ ಮತದಾನ ನಡೆಯಿತು.


ಇವೆಲ್ಲ ಮುಖ್ಯವಲ್ಲ; ಜನರಿಗೆ ಇವರು ಏನು ಮಾಡಿದ್ದಾರೆ ಎಂಬ ವಿಷಯ ಚುನಾವಣಾ ಪ್ರಚಾರದಲ್ಲಿ ಮುನ್ನೆಲೆಗೆ ಬರಲಿಲ್ಲ. ಅತಿ ಮುಖ್ಯವಾದ ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಬೆಲೆಯೇರಿಕೆ ಇವು ಪ್ರಮುಖ ಚುನಾವಣಾ ವಿಷಯಗಳು. ಆಳುವ ಬಿಜೆಪಿ ಅವುಗಳನ್ನು ಮರೆಸಿಡಲು ಪ್ರಯತ್ನಿಸಿದ್ದು ಸ್ಪಷ್ಟ. ಆದರೆ ಪ್ರತಿಪಕ್ಷಗಳು ಕೂಡ ಆಗೊಮ್ಮೆ ಈಗೊಮ್ಮೆ ಈ ವಿಷಯ ಮಾತನಾಡಿದ್ದು ಬಿಟ್ಟರೆ ಈ ಪ್ರಮುಖ ವಿಷಯಗಳತ್ತ ಹೆಚ್ಚು ಗಮನ ನೀಡಿಲ್ಲ.


ಕಾಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮತ್ತು ಕೆಲವು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆದರೆ ಅವು ಜನರ ಮೇಲೆ ಯಾವುದೇ ಗಾಢ ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಈಗ ಜಾಮೀನಿನ ಮೇಲೆ ಹೊರಗೆ ಬಂದಿರುವ ಆಮ್ ಆದ್ಮಿ ಪಕ್ಷದ ಪ್ರಮುಖ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಹತ್ತು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರು ಕೂಡ ಈಗ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.


ಕೇಜ್ರೀವಾಲ್ ಅವರ ಗ್ಯಾರಂಟಿಗಳು ಒಂದು ಮಟ್ಟಿಗೆ ಕಾಂಗ್ರೆಸ್ ಪ್ರಣಾಳಿಕೆಯಂತೆಯೆ ನೇರ ಜನರನ್ನು ಮುಟ್ಟುವಂತೆ ಇದೆ. ಅದರ ಜಾರಿ ಮುಂದಿನ ವಿಚಾರ ಮತ್ತು ಸಮಸ್ಯೆಯೂ ಇರುತ್ತದೆ. ಆದರೆ ಮೋದಿಯವರ ಗ್ಯಾರಂಟಿಗಳು ಜನೋಪಯೋಗಿ ಎನ್ನುವುದಕ್ಕಿಂತ ಹಿಂದೂ ಮನ ಕಲಕಿ ಮತ ಸೆಳೆಯುವ ತಂತ್ರದ್ದಾಗಿದೆ. 2014ರಲ್ಲಿ 75ರ ಪ್ರಾಯ ದಾಟಿದವರಿಗೆ ನಿವೃತ್ತಿ ಎಂದು ಗಟ್ಟಿಯಾಗಿ ಹೇಳಿದ್ದ ಮೋದಿಯವರ ತಂಡ ಈ ಬಾರಿ ಅದಕ್ಕೆ ಅಂಟಿಕೊಳ್ಳುತ್ತಿಲ್ಲ. ಏಕೆಂದರೆ ಈಗ ಮೋದಿಯವರಿಗೂ ಪ್ರಾಯ 75 ಮುಟ್ಟುತ್ತಿದೆ.


ಮೋದಿಯವರ ಈಗಿನ ಐದು ಗ್ಯಾರಂಟಿಗಳು ಮತ್ತೆ ಅದೇ ಧರ್ಮದ ರಾಗದ್ದಾಗಿದೆ. ಚುನಾವಣಾ ಆಯೋಗ ಎಂಬ ಹಲ್ಲಿಲ್ಲದ ಸ್ವಾಯುತ್ತ ಸಂಸ್ಥೆಯು ಇದನ್ನು ಕೇಳುವ ಯಾವ ಲಕ್ಷಣವೂ ಕಾಣುವುದಿಲ್ಲ. ಮೋದಿಯವರ ಐದು ಗ್ಯಾರಂಟಿಗಳೇನು? ನಾನು ಬದುಕಿರುವವರೆಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಿಲ್ಲ. ಇತ್ತೀಚೆಗೆ ಈಗಿರುವ ಮುಸ್ಲಿಂ ಮೀಸಲಾತಿ ಪ್ರಮಾಣ ಮುಂದುವರಿಸುವುದಾಗಿ ಹೇಳಿದ್ದರು. ಎಸ್‍ಸಿ/ಎಸ್‍ಟಿ/ಓಬಿಸಿ ಮೀಸಲು ನಿಲ್ಲಿಸಲು ಬಿಡುವುದಿಲ್ಲ. ಹಿಂದೆ ಕಾಂಗ್ರೆಸ್ ಕೊಟ್ಟುದನ್ನು ಮುಂದುವರಿಸುತ್ತೇನೆ ಎಂಬುದರ ಹೊರತಾಗಿ ತನ್ನ ಕೊಡುಗೆ ಏನು ಎನ್ನುವುದು ಮೋದಿಯವರ ಈ ಗ್ಯಾರಂಟಿಯಲ್ಲಿ ಇಲ್ಲ.


ರಾಮನವಮಿ ಆಚರಿಸಲು ನಿಮಗೆ ಅಡ್ಡಿ ಪಡಿಸುವವರಿಗೆ ಅವಕಾಶ ನೀಡುವುದಿಲ್ಲ. ಇದೇನು ಗ್ಯಾರಂಟಿ ಪ್ರಧಾನಿ ಮೋದಿಯವರೆ? ರಾಮ ನವಮಿ ಇರಲಿ, ಯಾವುದೇ ಆಚರಣೆ ಯಾರಾದರೂ ತಡೆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಆಯಾ ರಾಜ್ಯದ ಪೋಲೀಸು ವ್ಯವಸ್ಥೆ ಇದೆಯಲ್ಲ. ಅಯೋಧ್ಯೆ ತೀರ್ಪನ್ನು ತೆಗೆದು ಹಾಕಲು ಬಿಡುವುದಿಲ್ಲ. ಅದು ಕೋರ್ಟು ಆದೇಶ ಸ್ವಾಮಿ. ಸಿಎಎ ಅಂತ್ಯ ಹಾಡಲು ಅವಕಾಶ ನೀಡುವುದಿಲ್ಲ. ಸಿಎಎ ಇನ್ನೂ ಜಾರಿಗೊಂಡಿಲ್ಲ ಎನ್ನುವುದೇ ಸತ್ಯ. ಒಟ್ಟಾರೆ ಪ್ರಧಾನಿಯವರ ಈ ಐದು ಗ್ಯಾರಂಟಿಗಳು ಅಭಿವೃದ್ಧಿ ಬಿಟ್ಟು ಧಾರ್ಮಿಕ ಮನ ಕೆರಳಿಸುವ ಉದ್ದೇಶ ಮಾತ್ರ ಹೊಂದಿವೆ.


ಇದೇ ವೇಳೆ ಅರವಿಂದ ಕೇಜ್ರೀವಾಲ್ ಕೊಟ್ಟಿರುವ ಹತ್ತು ಗ್ಯಾರಂಟಿಗಳು ಇವು. 24 ಗಂಟೆ ವಿದ್ಯುತ್ ಪೂರೈಕೆ. ಗುಣಮಟ್ಟದ ಶಿಕ್ಷಣ. ಉತ್ತಮ ಆರೋಗ್ಯ ಸೌಲಭ್ಯ. ಚೀನಾ ಒತ್ತುವರಿಗೆ ಪರಿಹಾರ. ಅಗ್ನಿವೀರ್ ಹುದ್ದೆಗಳ ಕಾಯಂ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ದಿಲ್ಲಿಗೆ ರಾಜ್ಯ ಸ್ಥಾನಮಾನ. ಉದ್ಯೋಗಾವಕಾಶ ಸೃಷ್ಟಿ. ಭ್ರಷ್ಟಾಚಾರ ನಿರ್ಮೂಲನೆ. ಜಿಎಸ್‍ಟಿ ಸರಳೀಕರಣ. ಕೇಜ್ರೀವಾಲ್ ಅವರ ಈ ಹತ್ತೂ ಗ್ಯಾರಂಟಿಗಳು ನೇರ ಜನರ ಅಭಿವೃದ್ಧಿಗೆ ಸಂಬಂದಿಸಿದ್ದಾಗಿದೆ. ಈ ಬಗೆಯ ಚಿಂತನೆ ಪ್ರಧಾನಿ ಮೋದಿಯವರಿಗೆ ಏಕೆ ಬರಲಿಲ್ಲ? ಅವರದ್ದು ಜನಪರ ನಿಲುವು ಅಲ್ಲ ಎಂಬುದು ಇದು ಒಂದರಿಂದಲೇ ತಿಳಿದುಕೊಳ್ಳಲು ಸಾಧ್ಯವಿದೆ.


ಅರವಿಂದ ಕೇಜ್ರೀವಾಲರ 10ರಲ್ಲಿ ಮೂರು ಗ್ಯಾರಂಟಿಗಳು ಅವರ ಕೈಯೊಳಗೆ ಇರುವುದಿಲ್ಲ. ಅದು ಮುಂದೆ ಬರುವ ಒಕ್ಕೂಟ ಸರಕಾರದ ನೆರವಿನಿಂದ ಆಗಬೇಕಾಗುತ್ತದೆ. ಹಿಂದೆ ಅವರು ದಿಲ್ಲಿಯಲ್ಲಿ ನಡೆಸಿದ ಗ್ಯಾರಂಟಿ ಆಡಳಿತದಿಂದ ಆರನ್ನು ಅವರು ನೆರವೇರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಚೀನಾ ಒತ್ತುವರಿಗೆ ಪರಿಹಾರ, ಅಗ್ನಿವೀರ್ ಕಾಯಮಾತಿ, ಜಿಎಸ್‍ಟಿ ಸರಳಗೊಳಿಸುವಿಕೆ ಅವರು ಕೇಂದ್ರ ಸರಕಾರದ ಭಾಗವಾಗಿ ಮಾತ್ರ ಮಾಡಲು ಸಾಧ್ಯ ಹೊರತು ಅವರೊಬ್ಬರೇ ಮಾಡುವುದು ಸಾಧ್ಯವಿಲ್ಲ. ದಿಲ್ಲಿಗೆ ರಾಜ್ಯದ ಸ್ಥಾನಮಾನಕ್ಕೆ ಅವರು ಹೋರಾಡಬಹುದು. ಅವರ ಮಾತಿ ಒಳಾರ್ಥ ಇಷ್ಟೆ ತಮ್ಮ ಇಂಡಿಯಾ ಮೈತ್ರಿ ಕೂಟ ಗೆಲ್ಲುತ್ತದೆ, ಹತ್ತೂ ನೆರವೇರುತ್ತದೆ ಎನ್ನುವುದಾಗಿದೆ.

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.