ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ: ಸ್ಥಳೀಯ ಮೀನುಗಾರರಿಗೆ ವಿಶೇಷ ಒತ್ತು: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಕರಾವಳಿ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಲ್ಲಿ ಸ್ಥಳೀಯ ಮೀನುಗಾರರಿಗೆ ಆದ್ಯತೆ ನೀಡುವ ಬಗ್ಗೆ ವಿಶೇಷ ಕ್ರಮ ವಹಿಸಲಾಗುವುದು ಎಂದು  ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು  ಹೇಳಿದರು.

ಬೆಂಗಳೂರಿನ ವಿಕಾಸಸೌಧದ ಸಚಿವರ  ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗದ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನಷ್ಟು ವಿಸ್ತೃತ ಚರ್ಚೆಗಳನ್ನು ನಡೆಸಿ ಬಳಿಕ ಸ್ಥಳೀಯರೊಂದಿಗೆ ಕೂಡ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಉಪಸ್ಥಿತರಿದ್ದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ವಿ ರಾಜೇಂದ್ರ ಕುಮಾರ್ ಅವರು ಮಾತನಾಡಿ, 2024-2029ರ ಉದ್ದೇಶಿತ ರಾಜ್ಯದ ಪ್ರವಾಸೋದ್ಯಮ ಯೋಜನೆಯಲ್ಲಿ ದೊಡ್ಡಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕರಾವಳಿಯ ಬೀಚ್ ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಈ ಸಂದರ್ಭದಲ್ಲಿ  ಸ್ಥಳೀಯರಿಗೆ ಉದ್ಯೋಗ ಹಾಗೂ ವ್ಯವಹಾರಕ್ಕೆ ಪೂರಕವಾಗುವಂತೆ  ಹೆಚ್ಚಿನ ಚಿಂತನ ಮಂಥನ ನಡೆಸುವುದಾಗಿ ತಿಳಿಸಿದರು.

 ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಉಪಸ್ಥಿತರಿದ್ದ  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್  ಗಟ್ಟಿ  ಕಾಪಿಕಾಡ್,  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಹೆಚ್, ವಿ೪ ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಮೀನುಗಾರರ ಮುಖಂಡ ಚೇತನ್  ಬೇಂಗ್ರೆ, ಅವರು ಮಾತನಾಡಿ, ಪ್ರವಾಸೋದ್ಯಮ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರಿಗೆ ಅನುಕೂಲ ವಾಗುವಂತೆ ವ್ಯವಹಾರ, ಉದ್ಯಮ ಹಾಗೂ ಉದ್ಯೋಗವನ್ನು ರೂಪಿಸುವ ಬಗ್ಗೆ  ಮನವಿ ಮಾಡಿದರು.

Related Posts

Leave a Reply

Your email address will not be published.