ವಿಪರೀತ ಮಳೆಯಿಂದಾಗಿ ಮನೆಕುಸಿತ : ಬೀದಿಪಾಲಾಗುವ ಪರಿಸ್ಥಿತಿಯಲ್ಲಿ ಬಡ ಕುಟುಂಬ

ಪುತ್ತೂರು : ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮಂಜಲ್ಪಡ್ಪು ಜನತಾ ಕಾಲೋನಿಯ ನಿವಾಸಿ ವಸಂತ ಹೆಗ್ಡೆ ಅವರ ಮನೆ ವಿಪರೀತ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಈ ಬಡ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಸಂತ ಅವರ ತಾಯಿ ಅನಾರೋಗ್ಯ ಮತ್ತು ಮಾನಸಿಕ ಪೀಡಿತರಾಗಿದ್ದು, ವಸಂತ ಅವರು ಕೂಲಿ ಕೆಲಸ ಮಾಡಿಕೊಂಡು ಸಂಸಾರದ ನಿರ್ವಹಣೆ ಮಾಡುತ್ತಿದ್ದರು, ಹಂಚು, ಸಿಮೆಂಟು ಶೀಟು ಅಳವಡಿಕೆಯೊಂದಿಗೆ ಸ್ವಲ್ಪಭಾಗ ತಾರಸಿ ಮಾಡಿರುವ ವಸಂತ ಹೆಗ್ಡೆ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಇದೀಗ ಮನೆಯ ಹಿಂಬದಿಯ ಗೋಡೆ ಮತ್ತು ತಾರಸಿ ಭಾಗ ಕುಸಿದಿದೆ. ಪ್ರಸ್ತುತ ಎದುರಾಗಿರುವ ವಿಪತ್ತಿನಿಂದಾಗಿ ವಸಂತ ಅವರು ಕಂಗಾಲಾಗಿದ್ದಾರೆ.
ಪುತ್ತೂರು ನಗರಸಭೆಯವರು ಕುಸಿದು ಬಿದ್ದಿರುವ ಮನೆಯ ಮೇಲ್ಚಾವಣಿಗೆ ಹೊದಿಸಲು ಪ್ಲಾಸ್ಟಿಕ್ ಟರ್ಪಾಲ್ ನೀಡಿದ್ದು, ಅದನ್ನು ಮನೆಗೆ ಹೊದಿಸಿ ಈ ಕುಟುಂಬ ಅಪಾಯದ ಸ್ಥಿತಿಯಲ್ಲಿ ವಾಸ್ತವ್ಯವಿದೆ. `ಮನೆಗೆ ಇನ್ನಷ್ಟು ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ನೋಟೀಸು ತಲುಪಿದ 2 ದಿನದೊಳಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಮಂದಿನ ದಿನಗಳಲ್ಲಿ ಅನಾಹುತ ಸಂಭವಿಸಿದಲ್ಲಿ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕರು ಶನಿವಾರ ವಸಂತ ಅವರಿಗೆ ನೀಡಿರುವ ಸೂಚನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮನೆ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರ ಔಷಧಿಗೂ ಖರ್ಚು ಮಾಡಬೇಕಾಗಿದೆ. ತಾನು ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಸ್ಥಿತಿಯಲ್ಲಿ ಬದುಕುತ್ತಿದ್ದು, ಕುಸಿದಿರುವ ಮನೆಯವನ್ನು ಅದೇ ರೀತಿಯಲ್ಲಿ ಸರಿಪಡಿಸಿಕೊಟ್ಟರೆ ಸಾಕು ಎಂದು ವಸಂತ ಹೆಗ್ಡೆ ಅವರು ನಗರಸಭೆಗೆ ಮನವಿ ಮಾಡಿಕೊಂಡಿದ್ದಾರೆ.