ಅಮೃತ ನಗರೋತ್ಥಾನ ಯೋಜನೆ : 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯ ಅಂದಾಜು ಪಟ್ಟಿ

ಪುತ್ತೂರು: ಅಮೃತ ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ರೂ. 15 ಕೋಟಿ ಅಭಿವೃದ್ಧಿ ಯೋಜನೆಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಉಳಿಕೆ 10 ಕೋಟಿಗೆ ಶೀಘ್ರ ಅಂದಾಜು ಪಟ್ಟಿ ತಯಾರಿಸಲಾಗುವುದು ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದ್ದಾರೆ.
ನಗರಸಭೆ ಸಾಮಾನ್ಯ ಸಭೆಯು ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆಯಿತು. ಹಾರಾಡಿ -ರೈಲ್ವೇ ನಿಲ್ದಾಣ ರಸ್ತೆಯನ್ನು 82 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಲಾಗಿದ್ದು, ಸ್ವಲ್ಪ ಉಳಿಕೆಯಾಗುವ ರಸ್ತೆಯ ಅಭಿವೃದ್ಧಿಗೆ 15 ನೇ ಹಣಕಾಸು ಯೋಜನೆಯಲ್ಲಿ ಉಳಿಕೆಯಾಗಿರುವ ರೂ. 17.32 ಲಕ್ಷವನ್ನು ಬಳಸಿಕೊಳ್ಳಲು ಪುತ್ತೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ.

15 ನೇ ಹಣಕಾಸು ಅನುಮೋದನೆಗೊಂಡ ಕ್ರಿಯಾಯೋಜನೆಯಲ್ಲಿ 107.60 ಲಕ್ಷದ ಒಟ್ಟು 10 ಕಾಮಗಾರಿಗಳು ಪೂರ್ಣಗೊಂಡಿವೆ. ಪೂರ್ಣಗೊಂಡ ಕಾಮಗಾರಿಗಳಿಗೆ 90.28 ಲಕ್ಷ ಬಳಕೆಯಾಗಿದೆ. ಉಳಿಕೆ ರೂ. 17.32 ಲಕ್ಷವನ್ನು ಹಾರಾಡಿ -ರೈಲ್ವೇ ನಿಲ್ದಾಣ ರಸ್ತೆಯ ಉಳಿಕೆ ಭಾಗಕ್ಕೆ ಬಳಸಿಕೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಈ ರಸ್ತೆಯನ್ನು ಲಕ್ಷ್ಮೀ ದೇವಿ ಬೆಟ್ಟದ ಬಳಿಗೂ ವಿಸ್ತರಿಸುವಂತೆ ವಿಪಕ್ಷ ಸದಸ್ಯ ಶಕ್ತಿ ಸಿನ್ಹಾ ವಿನಂತಿಸಿದರು.
ವೇದಿಕೆಯಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ನಗರಸಭಾ ಆಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು. ಸದಸ್ಯರು ಹಾಗೂ ಅಧಿಕಾರಿಗಳು ಕಲಾಪದಲ್ಲಿ ಪಾಲ್ಗೊಂಡರು.