ಪುತ್ತೂರು ಬಸ್ಸು ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ನಾಮಕರಣ

ಪುತ್ತೂರು: ಜಿಲ್ಲೆಯ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರನ್ನು ಪುತ್ತೂರಿನ ಬಸ್ಸು ನಿಲ್ದಾಣಕ್ಕೆ ಇಡುವ ಮೂಲಕ ಅವರ ಹೆಸರನ್ನು ಮುಂದಿನ ಪೀಳಿಗೆಗೆ ನೆನಪಿಸುವ ಕೆಲಸ ಮಾಡಲಾಗಿದೆ. ಸರ್ಕಾರವು ಅವಳಿ ವೀರರ ನಾಮಕರಣ ಮಾಡಿ ಅವರಿಗೆ ಮಾನ್ಯತೆಯನ್ನು ನೀಡುವ ಕಾರ್ಯ ಮಾಡಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದದ ಪುತ್ತೂರು ಬಸ್ಸು ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ ಬಸ್ಸು ನಿಲ್ದಾಣ  ನಾಮಕರಣ ಸಮಾರಂಭದಲ್ಲಿ ನಾಮಫಲಕವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರಿನಲ್ಲಿ ಕಳೆದ 10 ವರ್ಷಗಳ ಹಿಂದೆ ನೂತನ ಬಸ್ಸು ನಿಲ್ದಾಣವನ್ನು ರೂ.೩೩ ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಬಳಿಕದ ದಿನಗಳಲ್ಲಿ ಆಧ್ಯಾತ್ಮಿಕ ಪುರುಷರಾದ ಕೋಟಿ ಚೆನ್ನಯರ ಹೆಸರನ್ನು ಬಸ್ಸು ನಿಲ್ದಾಣಕ್ಕೆ ನಾಮಕರಣ ಮಾಡುವ ಬಗ್ಗೆ ನಗರಸಭೆಯಿಂದ ನಿರ್ಣಯ ಅಂಗೀಕರಿಸಲಾಗಿತ್ತು.

ಪುತ್ತೂರಿನ ಪಡುಮಲೆಯಲ್ಲಿ ಹುಟ್ಟಿದ ಅವಳಿ ವೀರರು ಆಗಿನ ಅವಿಭಜಿತ ಪುತ್ತೂರಿನ ಎಣ್ಮೂರಿನಲ್ಲಿ ಮರಣ ಹೊಂದಿದ್ದರು. ಅವರ ಸಾಧನೆಯನ್ನು ಅರಿಯಲು ಹಾಗೂ ಅವರನ್ನು ನೆನಪಿಸಿಕೊಳ್ಳಲು ಈ ಬಸ್ಸು ನಿಲ್ಲಾಣದ ನಾಮಕರಣವು ಪೂರಕವಾಗಿದೆ ಎಂದರು.

ಕೋಟ ಚೆನ್ನಯರು ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಹಿಂದೂ ಧರ್ಮದ ಎಲ್ಲರ ಆರಾಧಕರು. ಸರ್ಕಾರವು ಕೋಟಿ ಚೆನ್ನಯರ ಆರಾಧಕರ ಜೊತೆಗಿದೆ ಎಂಬುದಕ್ಕೆ ಕೋಟಿ ಚನ್ನಯ ನಾಮಕರಣ ಪೂರಕವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ  ಪುತ್ತೂರಿನಲ್ಲಿ ಕೋಟಿ ಚೆನ್ನಯ ಥೀಮ್ ಪಾರ್ಕ್ ನಿರ್ಮಾಣದ ಬಗ್ಗೆಯೂ ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುವುದು. ಕೋಟಿ ಚೆನ್ನಯರ ೨೬೪ ಗರಡಿಗಳಿಗೂ ಜಾಗ ಮಂಜೂರು ಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಅವರನ್ನು ಬಿಲ್ಲವ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್,ರಾಜ್ಯ ವಿದ್ಯುನ್ಯಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್,  ಯುವವಾಹಿನಿ ಅಧ್ಯಕ್ಷ ಜಯಂತ ನಡುಬೈಲು,ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಸೀಲ್ದಾರ್ ಶಿವಶಂಕರ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ ಶೆಣೈ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪೌರಾಯುಕ್ತ ಮಧು ಎಸ್ ಮನೋಹರ್, ಗೆಜ್ಜೆಗಿರಿ ಕ್ಷೇತ್ರಾಡಳಿತದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಸಿ. ನಾರಾಯಣ,ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಜಯಕರ ಶೆಟ್ಟಿ, ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿ ಮುರಳೀಧರ ಆಚಾರ್ಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.