ಜ.22ರಂದು ಪುತ್ತೂರಿನಲ್ಲಿ ಕಾಂಗ್ರೆಸ್‍ನಿಂದ ಜನಧ್ವನಿ ಕಾರ್ಯಕ್ರಮ

ಪುತ್ತೂರು: ಮಂಗಳೂರಿನಲ್ಲಿ ಜ.22ರಂದು ಸಾಯಂಕಾಲ 4 ಗಂಟೆಗೆ ನಡೆಯುವ ಜನಧ್ವನಿ ಕಾರ್ಯಕ್ರಮದಲ್ಲಿ ಒಟ್ಟು 50ಸಾವಿರ ಮಂದಿ ಸೇರುವ ನಿರೀಕ್ಷೆಯನ್ನು ಇಟ್ಟಿಕೊಳ್ಳಲಾಗಿದೆ. ಪ್ರತಿ ಬೂತ್ ಮಟ್ಟದಿಂದ 20 ಜನರು ಭಾಗವಹಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ 5ಸಾವಿರ ಜನರು ಭಾಗವಹಿಸಲಿದ್ದಾರೆ. ಪಕ್ಷಕ್ಕೆ ಬದ್ದವಾಗಿ ಬರುವವರನ್ನು ಸ್ವಾಗತ ಮಾಡುತ್ತೇವೆ ಮತ್ತು ನಾವು ಪಕ್ಷದ ಚಿಹ್ನೆಯ ಕೆಳಗೆ ಕೆಲಸಮಾಡುತ್ತೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ಹೇಳಿದರು.

ಸದಸ್ಯತ್ವ ಅಭಿಯಾನದ ಮೂಲಕ ಬ್ಲಾಕ್ ಮಟ್ಟದಲ್ಲಿ 12 ಸಾವಿರ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ. ಎರಡು ವರ್ಷಗಳಿಂದ ಕಾರ್ಯಕರ್ತರ ನಿರಂತರ ಸಂಪರ್ಕವನ್ನು ಮಾಡುವ ಮೂಲಕ ಸಂಘಟನೆಯನ್ನು ಗಟ್ಟಿ ಮಾಡಲಾಗಿದೆ. ಮಂಗಳೂರು ಹೋಗುವ ನಿಟ್ಟಿನಲ್ಲಿ 40 ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಇದ್ದು, ಹಲವು ಭಾಗದಿಂದ ತಮ್ಮ ವಾಹನಗಳಲ್ಲಿಯೇ ಬರಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಪುತ್ತೂರಿನಿಂದ ವಾಹನಗಳು ಹೊರಡಲಿದೆ ಎಂದು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕೆ.ಪಿ.ಸಿ.ಸಿ. ವಕ್ತಾರ ಅಮಲಾ ರಾಮಚಂದ್ರ ಮಾತನಾಡಿ 200 ಯುನಿಟ್ ಉಚಿತ ವಿದ್ಯುತ್, ಮನೆಯಜಮಾನಿಗೆ ತಿಂಗಳಿಗೆ 2ಸಾವಿರ, ಬಿ.ಪಿ.ಎಲ್. ಕಾರ್ಡ್ ದಾರರಿಗೆ 10ಕೆ.ಜಿ. ಉಚಿತ ಅಕ್ಕಿ ನೀಡುವ ಪ್ರನಾಳಿಕೆಯನ್ನು ಪಕ್ಷ ಬಿಡುಗಡೆ ಮಾಡಿದೆ. ಇದು ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ತಂಪು ನೀಡುವ ಕೆಲಸವಾಗಿದೆ. ಶೇ.40 ಕಮಿಷನ್ ದಂಧೆಗೆ ಬ್ರೇಕ್ ಹಾಕಿದಾಗ ಜನ ಕಲ್ಯಾಣ ಕಾರ್ಯ ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕಾರ್ಮಿಕ ಘಟಕದ ರವೀಂದ್ರ ರೈ, ಎಸ್.ಟಿ. ಘಟಕದ ಮಹಾಲಿಂಗ ನಾಯ್ಕ, ಅಲ್ಪ ಸಂಖ್ಯಾತ ಘಟಕದ ಶಖೂರ್ ಹಾಜಿ ಹಾಜರಿದ್ದರು.

Related Posts

Leave a Reply

Your email address will not be published.