ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಲೋಕಾರ್ಪಣೆ

ಪುತ್ತೂರು : ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಸಾರ್ವಜನಿಕರಿಂದ ಯಾವುದೇ ದೂರುಗಳಿಲ್ಲದ ರೀತಿಯಲ್ಲಿ ಅಸ್ಪತ್ರೆಯನ್ನು ಸಜ್ಜುಗೊಳಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ashok kumar rai

ಅವರು ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಇಲೈಟ್, ಅಮೆರಿಕಾ ಫ್ಲೋರಿಡಾ ರೋಟರಿ ಕ್ಲಬ್ ನ್ಯೂ ಟಾಂಪಾ ನೂನ್ ವತಿಯಿಂದ ಕೊಡುಗೆಯಾಗಿ ನೀಡಲಾದ 6 ಡಯಾಲಿಸಿಸ್ ಯಂತ್ರಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ 2022ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮುಂದೆ ಸರ್ಕಾರಿ ಆಸ್ಪತ್ರೆಯನ್ನು 300 ಬೆಡ್‍ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ವ್ಯವಸ್ಥೆಗಳು ಇನ್ನಷ್ಟೇ ಆಗಬೇಕಿದೆ ಎಂದ ಅವರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅನಸ್ತೇಶಿಯಾ ಮತ್ತು ಪ್ರಸೂತಿ ತಜ್ಞರ ಹಾಗೂ ಟೆಕ್ನಿಷಿಯನ್ ಅಗತ್ಯವಿದೆ. ಈ ವಿಚಾರವನ್ನು ಈಗಾಗಲೇ ರಾಜ್ಯದ ಆರೋಗ್ಯ ಸಚಿವರ ಗಮನಕ್ಕೆ ತಂದು ವೈದ್ಯರ ನೇಮಕ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದ ಅವರು ಕಿಡ್ನಿ ವೈಫಲ್ಯಗೊಂಡವರ ನೋವು, ಅದರಿಂದಾಗಿ ಪಡುವ ಕಷ್ಟ ಅವರಿಗೆ ಮತ್ತು ಅವರ ಕುಟುಂಬದವರಿಗೆ ಮಾತ್ರ ಗೊತ್ತು. ಈ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯವರು ಕೊಡುಗೆಗಳ ಅರ್ಪಣೆ ಮಾಡಿದ್ದಾರೆ. ಇದನ್ನು ಸಮಾಜಕ್ಕೆ ಅರ್ಪಣೆ ಮಾಡುವ ಕೆಲಸವನ್ನು ಆಸ್ಪತ್ರೆಯವರು ಮಾಡಬೇಕು ಎಂದು ಅವರು ಹೇಳಿದರು.

ಆರ್‍ಓ ಪ್ಲಾಂಟ್ ಲೋಕಾರ್ಪಣೆ ಮಾಡಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಅನ್ನ, ಅಕ್ಷರ, ಆರೋಗ್ಯವನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ಸರ್ಕಾರದ್ದಾಗಿದ್ದು, ಈ ಕಾರ್ಯಕ್ಕೆ ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರೋಟರಿ ಸಂಸ್ಥೆಯವರು ಆರೋಗ್ಯ ಸೇವೆಗಾಗಿ ನೀಡಿರುವ ಕೊಡುಗೆಗಳೇ ಸಾಕ್ಷಿ. ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಆರೋಗ್ಯ ಸೇವೆ ನೀಡಲು ಎಲ್ಲಾ ರೀತಿಯ ಸಹಕಾರಗಳನ್ನು ನೀಡಿರುವ ರೋಟರಿ ಸಂಸ್ಥೆಯವರು ಇದೀಗ ಬಡವರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡುವ ಮಹಾತ್ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್,ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್, ರೋಟರಿ ಸಂಸ್ಥೆಯ ಪ್ರಮುಖರಾದ ಕೆ.ಕೃಷ್ಣ ಶೆಟ್ಟಿ, ಸೂರ್ಯನಾರಾಯಣ ಕೆ, ವಿಕ್ರಮದತ್ತ, ಪಿ.ಕೆ. ರಾಮಕೃಷ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ,ರೊ.ರತ್ನಾಕರ ರೈ,ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಕೆ. ಆಚಾರ್, ರೋಟರಿ ಸಂಸ್ಥೆಯ ನಾರಾಯಣ ಹೆಗ್ಡೆ, ಕೆ. ವಿಶ್ವಾಸ್ ಶೆಣೈ, ರಾಜೇಂದ್ರ ಕಲ್ಬಾವಿ, ಎ.ಜೆ.ರೈ, ಶಿವರಾಮ ಏನೆಕಲ್ಲು, ಹರ್ಷಕುಮಾರ್ ರೈ ಮಾಡಾವು, ಸೆನೋರೀಟಾ ಆನಂದ್ ಮತ್ತಿತರರು ಇದ್ದರು.

Related Posts

Leave a Reply

Your email address will not be published.