ಪುತ್ತೂರು: ರಾಜ್ಯದಲ್ಲಿ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ರೆ ಬಿಜೆಪಿಯಿಂದ ಬೃಹತ್ ಹೋರಾಟ: ಸಂಸದ ಕೋಟ
ಪುತ್ತೂರು: ರಾಜ್ಯದಲ್ಲಿ 12ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಅನಧಿಕೃತ ಬಿಪಿಎಲ್ ಕಾರ್ಡ್‌ಗಳೆಂದು ಗುರುತಿಸಲಾಗಿದ್ದು, ಇವುಗಳನ್ನು ರದ್ದು ಮಾಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಗೊತ್ತಾಗಿದೆ. ಇದರ ವಿರುದ್ಧ ಬಿಜೆಪಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರಿಗೆ ಬಂದಿದ್ದ ಅವರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಸುಮಾರು 38ಸಾವಿರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ಅನಧಿಕೃತ ಎಂಬ ಹಣೆಪಟ್ಟಿ ಕಟ್ಟಿ ಗುರುತಿಸಲಾಗಿದೆ. ಶ್ರೀಮಂತರಲ್ಲಿ ಬಿಪಿಎಲ್ ಕಾರ್ಡ್ಗಳಿದ್ದರೆ ರದ್ದು ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಬಡವರಿಗೆ ಅನ್ಯಾಯ ಆಗಬಾರದು. ಸರಕಾರ ಗೃಹಲಕ್ಷಿ?ಮ ಮೂಲಕ ನೀಡುತ್ತಿರುವ ಮಾಸಿಕ 2ಸಾವಿರ ರೂ.ಗಳನ್ನು ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಸೀಮಿತಗೊಳಿಸಬೇಕೆಂಬ ಚರ್ಚೆ ನಡೆಯುತ್ತಿರುವ ಹೊತ್ತಲ್ಲಿ ಈ ರೀತಿ 12 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದರೆ ಗೃಹಲಕ್ಷ್ಮೀ ಹಣ ಒಂದಷ್ಟು ಉಳಿತಾಯ ಮಾಡಬಹುದು ಎಂಬ ಲೆಕ್ಕಾಚಾರ ಸರಾರದಲ್ಲಿದೆಯೇ ಎಂಬ ಗುಮಾನಿ ಇದೆ ಎಂದವರು ಹೇಳಿದರು.
ಕಿಶೋರ್ ಬೊಟ್ಯಾಡಿ ಅವರಂಥ ಒಬ್ಬ ಅತ್ಯಂತ ಸಣ್ಣ ಸಮುದಾಯದ ತರುಣನಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಚಾರಿತ್ರಿಕ ನಿರ್ಧಾರ. ಉಭಯ ಜಿಲ್ಲೆಯಲ್ಲಿರುವ 6040 ಮತದಾರರ ಪೈಕಿ ಈಗಾಗಲೇ ಬಿಜೆಪಿ 1600ಮತಗಳಿಂದ ಮುಂದಿದೆ. ಇದಲ್ಲದೆ ಇತರ ಪಕ್ಷಗಳ ಮತಗಳೂ ಕೂಡ ನಮಗೆ ಸಿಕ್ಕಿ ದೊಡ್ಡ ಮಟ್ಟದ ಗೆಲುವು ಸಾಧಿಸುವ ಮೂಲಕ ಪಂಚಾಯತ್‌ರಾಜ್ ವ್ಯವಸ್ಥೆ ಬಲಪಡಿಸಬೇಕೆಂಬುದು ನಮ್ಮ ಒತ್ತಾಸೆ. ಈಗಾಗಲೇ 2 ಸುತ್ತಿನ ಪ್ರಚಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್, ಪುತ್ತೂರು ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ನಿತೀಶ್ ಕುಮಾರ್ ಶಾಂತಿವನ, ಸಂತೋಷ್ ರೈ ಉಪಸ್ಥಿತರಿದ್ದರು.