ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ : ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ಪುತ್ತೂರಿಗೆ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ವಂತ ಮನೆ, ವಾಣಿಜ್ಯ ಉದ್ದೇಶಕ್ಕೆ 10 ಸೆಂಟ್ಸ್ ಭೂಮಿಯನ್ನು ಭೂ ಪರಿವರ್ತನೆಗೆ ಅವಕಾಶ ನೀಡಿರುವುದು ಸರಕಾರದ 2 ದೊಡ್ಡ ಕೊಡುಗೆಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರಿನಲ್ಲಿ ಸುಸಜ್ಜಿತವಾದ ಒಳಗಾಂಣ ಹೊರಾಂಗಣ ಇರುವಂತಹ ಕ್ರಿಕೆಟ್ ಕ್ರೀಡಾಂಗಣಕ್ಕೆ 23 ಎಕ್ರೆ 26 ಸೆಂಟ್ಸ್ ಜಾಗದಲ್ಲಿ ಕ್ರೀಡಾಂಗಣ ಮಾಡಲು ಮುಖ್ಯಮಂತ್ರಿ ಕ್ಯಾಬಿನೆಟ್‍ನಲ್ಲಿ ಕಳೆದ ಗುರುವಾರ ಅನುಮತಿ ನೀಡಿ ರೂ. 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಸ್ಟೇಟ್ ಅಸೋಸಿಯೇಶನ್ ಕ್ರೀಡಾಂಗಣ ನಿರ್ಮಾಣ ಮಾಡಿ ಮುಂದಿನ ದಿನ ರಾಜ್ಯಮಟ್ಟದ ರಣಜಿ ಪಂದ್ಯಾಕೂಟ ಕೂಡಾ ಇಲ್ಲಿ ಆಗಲು ನಮ್ಮ ಸರಕಾರ ಕಾರ್ಯಪ್ರವೃತವಾಗಿದೆ ಎಂದರು.

ಸರಕಾರ ಇವತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಖಾಸಗಿ ಜಮೀನಿನಲ್ಲಿ ಉದ್ಯಮ, ಮನೆ ಕಟ್ಟಲು ಒಂದಷ್ಟು ಭೂ ಪರಿವರ್ತನೆ ಸಮಸ್ಯೆ ಇತ್ತು. ಇದು ಕಾಂಗ್ರೆಸ್ ಸರಕಾರ ಇರುವಾಗ ಲ್ಯಾಂಡ್ ರೆವೆನ್ಯು ಆಕ್ಟ್‍ನಲ್ಲಿ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದ ಬಂಧುಗಳು ಯಾವುದೇ ಜಮೀನನ್ನು ಪರಾಭಾರೆ ಮಾಡಬಾರದು ಎಂದು ಪಿಟಿಸಿಎಲ್ ಆಕ್ಟ್‍ನಲ್ಲಿ ಇದನ್ನು ಅಳವಡಿಸಲಾಗಿತ್ತು. ಇದರಿಂದಾಗಿ ಅವರಿಗೆ ಕಾನೂನಿನ ತೊಡಕು ಉಂಟಾಗುತ್ತಿತ್ತು. ಈ ಕುರಿತು ನಾನು ವಿಧಾನಸಭೆಯಲ್ಲಿ ಕಾನೂನಿನ ತೊಡಕಿನಿಂದ ಸಡಿಲೀಕರಣ ಮಾಡಬೇಕೆಂದು ಪ್ರಶ್ನೆ ಮಾಡಿದ್ದೆ. ಕಂದಾಯ ಸಚಿವರು ಈ ಕುರಿತು ಪರಿಶೀಲನೆ ಮಾಡುತ್ತೇನೆ ಎಂದಿದ್ದರು. ಇವತ್ತು ಕಂದಾಯ ಸಚಿವರು ಕಾನೂನು ಸರಳಿಕರಣದ ವ್ಯವಸ್ಥೆ ಮಾಡಿದ್ದು, ಕನಿಷ್ಠ 10 ಸೆಂಟ್ಸ್ ಜಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಧುಗಳಿಗೆ ಮನೆ, ಅಂಗಡಿ, ವಾಣಿಜ್ಯ ಉದ್ಯಮ ಮಾಡಲು ಅನುಮತಿಗೆ ಜಿಲ್ಲಾಧಿಕಾರಿಯವರಿಗೆ ಅವಕಾಶ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.