ಜ.28ರಂದು ಪುತ್ತೂರಿನಲ್ಲಿ 30ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 30ನೇ ವರ್ಷದ ಕೋಟ ಚೆನ್ನಯ ಜೋಡುಕರೆ ಕಂಬಳ ಜ.28ರಂದು ಬೆಳಗ್ಗೆ 10.35ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಉದ್ಘಾಟಿಸಲಿದ್ದು, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಂಬಳ ಸಮಿತಿ ಮಾರ್ಗದರ್ಶಕಿ ಶಕುಂತಳಾ ಟಿ. ಶೆಟ್ಟಿ ಮತ್ತು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಹೇಳಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಾಯಂಕಾಲ 6ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಉದ್ಯಮಿ ಪ್ರಕಾಶ್ ಶೆಟ್ಟಿ ವಹಿಸಲಿದ್ದು, 30ನೇ ವರ್ಷದ ಸ್ಮರಣ ಸಂಚಿಕೆ ಬಿಡುಗಡೆಯನ್ನು ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾಡಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎನ್. ಸುಧಾಕರ ಶೆಟ್ಟಿ ಪುತ್ತೂರು (ಧಾರ್ಮಿಕ ಕ್ಷೇತ್ರ), ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ (ಕಂಬಳ ಕ್ಷೇತ್ರ), ಆಕಾಶ್ ಐತಾಳ್ (ಕ್ರೀಡಾ ಕ್ಷೇತ್ರ), ಸತೀಶ್ ದೇವಾಡಿಗ ಅಳದಂಗಡಿ (ಹಿರಿಯ ಕಂಬಳ ಓಟಗಾರರು), ಶ್ರೀಧರ್ ಮಾರೋಡಿ (ಕಂಬಳ ಓಟಗಾರ ಕ್ರೀಡಾರತ್ನ ಪುರಸ್ಕೃತರು) ಅವರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಸುಮಾರು 200ಜೋಡಿ ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆ ಇಟ್ಟಿದ್ದು, ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ ಅವರ ಮಿಂಚಿನ ಓಟದ ಕೋಣ ಚೆನ್ನ ನಿಗೆ ಸನ್ಮಾನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ನಟ ನಟಿಯರಾದ ಅದಿತಿ ಪ್ರಭುದೇವ, ಸಂಗೀತ ಶೃಂಗೇರಿ, ಸಾನಿಯ ಅಯ್ಯರ್, ದೀಪಕ್ ರೈ ಪಾಣಾಜೆ, ಸಂಗೀತ ನಿರ್ದೇಶಕ ಗುರುಕಿರಣ್, ಬಿಗ್‍ಬಾಸ್-9 ವಿಜೇತ ರೂಪೇಶ್ ಶೆಟ್ಟಿ, ನಿರ್ಮಾಪಕ ರವಿ ರೈ ಕಳಸ, ವಿಕ್ರಾಂತ್ ರೋಣ ಖ್ಯಾತಿಯ ವಜ್ರಧೀರ್ ಜೈನ್, ಡೈಜಿ ವರ್ಲ್ಡ ನ ವಾಲ್ಟರ್ ನಂದಳಿಕೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಜ.29ರಂದು ಬಹುಮಾನ ವಿತರಣೆ ನಡೆಯಲಿದ್ದು, ಅಧ್ಯಕ್ಷತೆಯನ್ನು ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್ ವಹಿಸಲಿದ್ದು, ಸಂಸದ ನಳಿನ್ ಕುಮಾರ್, ಶಾಸಕ ಮಠಂದೂರು ಸೇರಿ ಗಣ್ಯರು ಭಾಗವಹಿಸಲಿದ್ದಾರೆ. ಹಿರಿಯ ವಿಭಾಗದಲ್ಲಿ ಪ್ರಥಮ ವಿಜೇತ ಕೋಣಗಳಿಗೆ 2 ಪವನ್ ಚಿನ್ನ (16ಗ್ರಾಂ) ದ್ವಿತೀಯ ವಿಜೇತ ಕೋಣಗಳಿಗೆ 1 ಪವನ್ ಚಿನ್ನ (8 ಗ್ರಾಂ) ಬಹುಮಾನ ಹಾಗೂ ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್ ಹಾಗೂ ದ್ವಿತೀಯ 1/2 ಪವನ್ ಚಿನ್ನದ ಬಹುಮಾನ ವಿಜೇತ ಕೋಣಗಳ ಓಟಗಾರರಿಗೂ ಪೆÇ್ರೀತ್ಸಾಹಕ ಬಹುಮಾನವಿದೆ. ವಿಜೇತ ಕೋಣಗಳ ಮಾಲಕರಿಗೆ ಚಿನ್ನದೊಂದಿಗೆ ವಿಶೇಷ ಕೋಟಿಚೆನ್ನಯ ಟ್ರೋಫಿಯನ್ನು ನೀಡಲಿದ್ದೇವೆಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ ಉಪಸ್ಥಿತರಿದ್ದರು.