ಪುತ್ತೂರು ಮೆಡಿಕಲ್ ಕಾಲೇಜು ವಿಚಾರ : ಮಂಜೂರು ಜಾಗದಲ್ಲಿ `ಸೀಫುಡ್ ಕಾರ್ಖಾನೆ’ ಮುಂದಾದವರು ಯಾರು : ಎಂ.ಬಿ. ವಿಶ್ವನಾಥ ರೈ ಪ್ರಶ್ನೆ
ಪುತ್ತೂರು: ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೊದಲು ಕನಸು ಕಂಡವರೇ ನಾವು ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ್ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದು, ಕಾಲೇಜು ಹೋರಾಟ ಅಭಿಯಾನ ಕಾಂಗ್ರೆಸ್ನ ಟೂಲ್ ಕಿಟ್ ಎಂದು ಆಪಾದಿಸಿದ್ದಾರೆ. ಒಂದು ವೇಳೆ ಬಿಜೆಪಿ ಮೆಡಿಕಲ್ ಕಾಲೇಜಿಗೆ ಮೊದಲು ಕನಸು ಕಂಡಿದ್ದು ನಿಜವೇ ಆಗಿದ್ದರೆ ಪುತ್ತೂರು ಶಾಸಕರು ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ `ಸೀಫುಡ್ ಕಾರ್ಖಾನೆ’ ತರಲು ಯಾಕೆ ಹೊರಟರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅವರು ಸುದ್ದಿಓಷ್ಟಿಯಲ್ಲಿ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ. ಇದರಲ್ಲಿ ಎಲ್ಲ ಜಾತಿ, ಪಕ್ಷ, ಧರ್ಮದವರಿದ್ದಾರೆ. ಈ ಹೋರಾಟ ಪುತ್ತೂರು ಮತ್ತು ಪಕ್ಕದ ತಾಲೂಕುಗಳ ಜನರ ಆರೋಗ್ಯ ರಕ್ಷಣೆಗಾಗಿ ಮಾಡಲಾಗುತ್ತಿದೆಯೇ ಹೊರತು ಕಾಂಗ್ರೆಸ್ನ ಟೂಲ್ಕಿಟ್ ಅಲ್ಲ ಎಂದವರು ಸ್ಪಷ್ಟಪಡಿಸಿದರು.
ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಜ. ಹಾಗೆಂದು ಈ ಹುದ್ದೆಯ ಹೆಸರಿನಲ್ಲಿ ನಾನು ಆ ಸಮಿತಿಗೆ ಅಧ್ಯಕ್ಷನಾಗಿದ್ದಲ್ಲ. ಸಮಾಜದ ಮೇಲಿನ ತುಡಿತದಿಂದ ಆ ಹೋರಾಟಕ್ಕೆ ಇಳಿದೆವು. ಎಲ್ಲ ವರ್ಗದ ಜನರಿಂದ ಅದ್ಭುತ ಸ್ಪಂದನೆ ಸಿಕ್ಕಿದೆ. ಎಲ್ಲ ಪಕ್ಷದವರೂ ನಮ್ಮೊಂದಿಗಿದ್ದಾರೆ. ಹೋರಾಟಗಾರರು ನನ್ನನ್ನು ಅಧ್ಯಕ್ಷನಾಗಿ ಮಾಡಿದಾಗ ಪ್ರೀತಿಯಿಂದ ಒಪ್ಪಿಕೊಂಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಪಕ್ಷದಲ್ಲಿರುವ ಒಬ್ಬ ವ್ಯಕ್ತಿ ಸಾಮಾಜಿಕ ಹೋರಾಟದಲ್ಲಿ ಭಾಗವಹಿಸಬಾರದು ಎಂದಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಈ ಅಭಿಯಾನ ನಮ್ಮ ಸರ್ಕಾರದ ವಿರುದ್ಧ ಎಂದು ಬಿಜೆಪಿಯವರಿಗೆ ಅನಿಸಿದೆಯೋ ಏನೋ. ಆದರೆ ಇದು ಸರ್ಕಾರ, ಪಕ್ಷದ ವಿರುದ್ಧದ ಅಭಿಯಾನವಲ್ಲ. ಜನರ ಹಕ್ಕೊತ್ತಾಯ ಮಂಡಿಸುವ ಜನಾಂದೋಲನವಾಗಿದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಶಾಸಕ ಸಂಜೀವ ಮಠಂದೂರು ಅವರಿಗೆ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದು ಇಷ್ಟವಿರಲಿಲ್ಲ. ಕಾಲೇಜಿನ ಜಾಗಕ್ಕೆ ಸೀಫುಡ್ ಕಾರ್ಖಾನೆ ತರುವ ಸಂದರ್ಭ ಅವರೇ ಪತ್ರಿಕಾ ಹೇಳಿಕೆ ನೀಡಿ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರುವುದಿಲ್ಲ. ಅದಕ್ಕೆ ಬೇಕಾದ ಮಾನದಂಡ ಇಲ್ಲಿ ಇಲ್ಲ ಎಂದು ಹೇಳಿದ್ದರು. ಈಗ ಮೆಡಿಕಲ್ ಕಾಲೇಜು ಪರವಾಗಿ ದೊಡ್ಡ ಮಟ್ಟದ ಆಂದೋಲನ ನಡೆಯುತ್ತಿರುವುದನ್ನು ಕಂಡು ನಾವು ಕೂಡ ಮೆಡಿಕಲ್ ಕಾಲೇಜು ಪರವಾಗಿದ್ದೇವೆ ಎಂದು ಹೇಳುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರೀಸ್ ಮಸ್ಕರೇನಸ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಶಕೂರ್ ಹಾಜಿ, ಎಸ್ಸಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.