ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆಯ ಸ್ಥಾಪಕ ರಘುನಂದನ್ ಕಾಮತ್ ನಿಧನ

ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆಯ ಸ್ಥಾಪಕ, ಉದ್ಯಮಿ ರಘುನಂದನ್ ಕಾಮತ್ (70) ಅವರು ಅಲ್ಪಕಾಲದ ಅನಾರೋಗ್ಯದಿಂದ ಮುಂಬೈನಲ್ಲಿ ಶುಕ್ರವಾರ ರಾತ್ರಿ ನಿಧನರಾದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ರಘುನಂದನ್ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಜನಿಸಿದ್ದರು. ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. ರಘುನಂದನ್ ಚಿಕ್ಕವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ, ಅಲ್ಲಿ ತಮ್ಮ ಅಣ್ಣನ ರೆಸ್ಟೋರೆಂಟ್‍ನಲ್ಲಿ ಕೆಲಸ ಆರಂಭಿಸಿದರು. 1984ರಲ್ಲಿ ನಾಲ್ವರ ಸಿಬ್ಬಂದಿಯನ್ನು ಇಟ್ಟುಕೊಂಡು ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆ ಹುಟ್ಟುಹಾಕಿದರು. ಆರಂಭದ ದಿನಗಳಲ್ಲಿ ಪಾವ್ ಬಾಜಿ ಜತೆ ಐಸ್‍ಕ್ರೀಂ ನೀಡಿ ಗ್ರಾಹಕರನ್ನು ಸೆಳೆದರು. ನ್ಯಾಚುರಲ್ ಐಸ್ಕ್ರೀಂ ಈಗ ದೇಶಾದ್ಯಂತ 135ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವರ್ಷಕ್ಕೆ ಸುಮಾರು 400 ಕೋಟಿ ವಹಿವಾಟು ನಡೆಸುತ್ತಿದೆ.