ರಾಜ್ಯದ ವಿವಿಧೆಡೆ ಡಿಸೆಂಬರ್ 14ರವರೆಗೆ ಮಳೆ ಮುಂದುವರಿಕೆ

ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ, ಮಂಡ್ಯ, ಹಾಸನ, ಕೊಡಗು, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮ್ಯಾಂಡೌಸ್ ಚಂಡಮಾರುತದ ಪರಿಣಾಮ ರಾಜ್ಯದ ವಿವಿಧೆಡೆ ಡಿಸೆಂಬರ್ 14ರವರೆಗೆ ಮಳೆ ಮುಂದುವರಿಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ, ಮಂಡ್ಯ, ಹಾಸನ, ಕೊಡಗು, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಶನಿವಾರ ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗದಲ್ಲಿ ಹೆಚ್ಚು ಮಳೆಯಾಗಿದ್ದು, ಬೆಂಗಳೂರು, ದಕ್ಷಿಣ ಒಳನಾಡು, ಕರಾವಳಿ ಕರ್ನಾಟಕ, ಉತ್ತರ ಒಳನಾಡಿನ ಕೆಲವೆಡೆಯೂ ಮಳೆ ಸುರಿದಿದೆ. ಶನಿವಾರ ತಡರಾತ್ರಿ ಮತ್ತು ಭಾನುವಾರ ನಸುಕಿನ ವೇಳೆಯೇ ಕರಾವಳಿಯ ವಿವಿಧೆಡೆ ಹಗುರವಾದ ಮಳೆ ಬಿದ್ದಿದೆ.
ಡಿಸೆಂಬರ್ 11ರ ಬಳಿಕ ಚಂಡಮಾರುತದ ಪ್ರಭಾವವು ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಬೀರುವ ಸಾಧ್ಯತೆಯಿದ್ದು, ಡಿಸೆಂಬರ್ 13ರ ನಂತರ ಕರಾವಳಿ ಕರ್ನಾಟಕದ ಅರಬ್ಬಿ ಸಮುದ್ರ ಮೂಲಕ ಹಾದು ಬೇರೆಡೆ ಸಾಗಲಿದೆ. ಇದರಿಂದ ಈ ಭಾಗಗಳಲ್ಲಿ ಭಾರೀ ಚಳಿಯಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ತಿಳಿಸಿರುವುದಾಗಿ ವರದಿಯಾಗಿದೆ.