ಸೆ.24 : ರಾಮಕೃಷ್ಣ ವಿದ್ಯಾರ್ಥಿಭವನಕ್ಕೆ ಅಮೃತ ಮಹೋತ್ಸವದ ಸಂಭ್ರಮ

ಹೆಣ್ಮಕ್ಕಳು ಶಿಕ್ಷಣ ಪಡೆಯಬಾರದು ಎನ್ನುವ ಹೊತ್ತಲ್ಲಿ ಅವರ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿ ನಿಲಯ ತೆರೆದು ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದವರು ಕರಾವಳಿಯ ಬಂಟರು. ಒಂದೆಡೆ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಿದ್ದ ಹೊತ್ತಲ್ಲೇ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಬಂಟರ ಸಂಘದವರು ಮಂಗಳೂರಿನಲ್ಲಿ ರಾಮಕೃಷ್ಣ ವಿದ್ಯಾರ್ಥಿನಿ ಭವನ ಆರಂಭಿಸಿದ್ದರು. ಸ್ವಾತಂತ್ರ್ಯ ಸಿಗೋದಕ್ಕೂ ಮೊದಲೇ ಸ್ಥಾಪನೆಗೊಂಡಿದ್ದ ವಿದ್ಯಾರ್ಥಿನಿ ಭವನಕ್ಕೀಗ ಅಮೃತೋತ್ಸವದ ಸಂಭ್ರಮ.ಮಂಗಳೂರು ನಗರದ ಹೃದಯಭಾಗ ಲಾಲ್ ಭಾಗ್ ನಲ್ಲಿ ನೆಲೆನಿಂತಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಲಕ್ಷಾಂತರ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ, ಅವರ ಬದುಕಿಗೆ ಮುನ್ನುಡಿ ಬರೆದ ಸಂಸ್ಥೆ. ಹೆಣ್ಮಕ್ಕಳು ಶಿಕ್ಷಣ ಪಡೆಯುವಂತಿಲ್ಲ ಎಂಬ ಸಮಾಜದ ಕಟ್ಟುಪಾಡುಗಳ ನಡುವೆ, ಹೆಣ್ಮಕ್ಕಳಿಗಾಗಿಯೇ ಹಾಸ್ಟೆಲ್ ತೆರೆದು ಶಿಕ್ಷಣದಲ್ಲಿ ಕ್ರಾಂತಿ ಎಬ್ಬಿಸಿದ್ದ ಸಂಸ್ಥೆ. 1941ರಲ್ಲಿ ಕೇವಲ ಆರು ವಿದ್ಯಾರ್ಥಿನಿಯರಿಂದ ಬಾವುಟಗುಡ್ಡೆಯ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿದ್ದ ವಿದ್ಯಾರ್ಥಿನಿ ಭವನ, 1948ರ ವೇಳೆಗೆ ಲಾಲ್ ಬಾಗಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.

ಇಲ್ಲಿನ ವಿದ್ಯಾರ್ಥಿನಿ ಭವನಕ್ಕೀಗ 75ನೇ ವರ್ಷದ ಸಂಭ್ರಮ. ಅಂದರೆ, ಲಕ್ಷಾಂತರ ಹೆಣ್ಮಕ್ಕಳ ಬಾಳಿಗೆ ಬೆಳಕಿತ್ತ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತೋತ್ಸವದ ಸಂಭ್ರಮದಲ್ಲಿದೆ.
ಇಲ್ಲಿ ನೆಲೆ ನಿಂತು ಓದಿದ ಅದೆಷ್ಟೋ ಮಂದಿ ವಿದ್ಯಾರ್ಥಿನಿಯರು ಜಗತ್ತಿನೆತ್ತರಕ್ಕೆ ನಿಂತು ಸಾಧನೆ ಮಾಡಿದ್ದಾರೆ. ವೈದ್ಯರು, ಎಂಜಿನಿಯರ್, ಪತ್ರಕರ್ತರು, ಸಮಾಜಸೇವೆ, ರಾಜಕೀಯ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿದ್ದಾರೆ. ಸಾವಿರಾರು ಹೆಣ್ಮಕ್ಕಳು ದೇಶ- ವಿದೇಶದಲ್ಲಿ ಉದ್ಯೋಗ ಪಡೆದಿದ್ದಾರೆ. ಬಂಟರ ಸಂಘದ ನೇತ್ರತ್ವದಲ್ಲಿ ಹಾಸ್ಟೆಲ್ ನಡೆಸುತ್ತಿದ್ದರೂ, ಎಲ್ಲ ವರ್ಗದ ಬಡ ಮಕ್ಕಳಿಗೂ ಇಲ್ಲಿ ವಸತಿ ಕಲ್ಪಿಸಲಾಗಿತ್ತು. ಹೀಗಾಗಿ ಇಲ್ಲಿ ಶಿಕ್ಷಣ ಪಡೆದವರು ಒಂದೇ ವರ್ಗಕ್ಕೆ ಸೇರಿದವರಲ್ಲ. ಇಂಥ ಅಪೂರ್ವ ಸಾಧನೆಗೆ ಕಾರಣವಾದ, ಜನ ಸಮುದಾಯದ ನಡುವೆ ಶಿಕ್ಷಣಕ್ಕಾಗಿ ಕ್ರಾಂತಿ ನಡೆಸಿದ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವವನ್ನು ವರ್ಷಪೂರ್ತಿ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಅದಕ್ಕಾಗಿ ಬಂಟ ಸಮಾಜದ ಮುಂಚೂಣಿ ನಾಯಕಿಯರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನೂ ರಚಿಸಲಾಗಿದೆ.

ಅಮೃತ ಮಹೋತ್ಸವ ಸಮಾರಂಭವನ್ನು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಸೆ.23 ಮತ್ತು 24ರಂದು ಹಮ್ಮಿಕೊಳ್ಳಲಾಗಿದೆ. 23ರಂದು ವಿಶ್ವ ಬಂಟರ ಮಾಹಿತಿ ಕೋಶದ ಬಿಡುಗಡೆ ಆಗಲಿದೆ. 75ರ ಸಂಭ್ರಮದ ಉದ್ಘಾಟನಾ ಸಮಾರಂಭ ಮರುದಿನ 24ರಂದು ನಡೆಯಲಿದೆ. ಅಪೂರ್ವ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿ ನಿಲಯದಲ್ಲಿ ಇದ್ದುಕೊಂಡು ಓದಿ ಸಾಧನೆ ಮಾಡಿದವರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸಾಕ್ಷಿಯಾಗಲಿದ್ದಾರೆ.ಒಟ್ಟು ಕಾರ್ಯಕ್ರಮಕ್ಕೆ ಬಂಟರ ಮಾತೃ ಸಂಘದವರು ಸರ್ವರಿಗೂ ಆಮಂತ್ರಣ ನೀಡಿದ್ದು ಸಮಾಜದ ಸರ್ವರು ಸೇರಿ ಅಪೂರ್ವ ಉತ್ಸವಕ್ಕೆ ಸಾಕ್ಷಿಯಾಗಲು ಕೋರಿದ್ದಾರೆ.

Related Posts

Leave a Reply

Your email address will not be published.