ಇಲಿಜ್ವರ : ಉಡುಪಿ ಜಿಲ್ಲೆಯಲ್ಲಿ 112 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಮಂದಿ

ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಶೀತ, ಜ್ವರ, ಗಂಟಲು ನೋವು, ವಾಂತಿ, ಅಲರ್ಜಿಯಿಂದ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ನಡುವೆ ಸದ್ದಿಲ್ಲದೇ ಇಲಿ ಜ್ವರವೂ ತನ್ನ ಕಬಂಧ ಬಾಹುವನ್ನು ಚಾಚುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಮಳೆಗಾಲದಲ್ಲಿ 112 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 305 ಮಂದಿ ಇಲಿಜ್ವರ ಬಾಧಿತರಾಗಿದ್ದಾರೆ.
ಉಡುಪಿಯಲ್ಲಿ ಆಗಸ್ಟ್ ನಲ್ಲಿ ಒಟ್ಟು 163 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಪ್ರಸ್ತುತ 42 ಪ್ರಕರಣಗಳು ಸಕ್ರಿಯವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 192, ಬಂಟ್ವಾಳ ತಾಲೂಕಿನಲ್ಲಿ 37, ಬೆಳ್ತಂಗಡಿಯಲ್ಲಿ 51, ಪುತ್ತೂರಿನಲ್ಲಿ 19 ಮತ್ತು ಸುಳ್ಯ ತಾಲೂಕಿನಲ್ಲಿ 6 ಮಂದಿ ಸಹಿತ ಒಟ್ಟು 305 ಮಂದಿಗೆ ಈ ವರ್ಷ ಇಲಿ ಜ್ವರ ಬಾಧಿಸಿದೆ.
ಇಲಿಜ್ವರದ ಮೂಲ
ಇಲಿಜ್ವರ ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು ಆಗಿದೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ಮನುಷ್ಯರ ಚರ್ಮಕ್ಕೆ ತಾಗಿದರೆ ಸೋಂಕು ಉಂಟಾಗಬಹುದು. ಇಲಿಗಳನ್ನು ಹಿಡಿಯುವ ಬೆಕ್ಕು ಹಾಗೂ ನಾಯಿಗಳಿಂದಲೂ ಸೋಂಕು ತಗಲಬಹುದು. ಮನೆಯಲ್ಲಿ ಎಲ್ಲಾದರೂ ಇಲಿಯ ಮಲ ಬಿದ್ದಿದ್ದರೆ ಮೊದಲು ಆ ಸ್ಥಳವನ್ನು ಸ್ವತ್ಛ ಮಾಡಿ ಸೋಂಕು ವಿರೋಧಿ ದ್ರವ ಸಿಂಪಡನೆ ಮಾಡಬೇಕು.
ಲಕ್ಷಣಗಳು
ರೋಗಾಣು ದೇಹದೊಳಗೆ ಪ್ರವೇಶಿಸಿದ 2ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಂಡುಬರುತ್ತದೆ. ಮೈಕೈ ನೋವು, ತಲೆನೋವು, ವಾಂತಿ, ಹೊಟ್ಟೆನೋವು ಕೂಡ ಈ ಜ್ವರದ ಲಕ್ಷಣವಾಗಿದೆ. ಬೇಸಾಯಗಾರರು, ಮೀನುಗಾರರು, ಹಂದಿ ಸಾಕಣೆ ಮಾಡುವವರು, ಚರಂಡಿ ಕೂಲಿ ಕಾರ್ಮಿಕರು, ಮಾಂಸದ ವ್ಯಾಪಾರಿಗಳಿಗೆ ಜ್ವರದ ಭೀತಿ ಎದುರಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಗುಣಮುಖವಾಗುವ ಸಾಧ್ಯತೆಗಳಿರುತ್ತದೆ. ಕಾಲು ಬಿರುಕು ಇದ್ದರೆ ಈ ಕಾಯಿಲೆ ಸುಲಭದಲ್ಲಿ ಹರಡುತ್ತದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಇಲಿಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲಿಜ್ವರಕ್ಕೆ ಬೇಕಾದ ಎಲ್ಲ ಔಷಧಗಳನ್ನು ದಾಸ್ತಾನು ಇರಿಸಲಾಗಿದೆ. ಜನರು ಆದಷ್ಟು ಜಾಗರೂಕರಾಗಿರಬೇಕು. ರೋಗಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ತೋರದೆ ತತ್ಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.
