ಡಿ.1ರಿಂದ ಆಟೊ ರಿಕ್ಷಾಗಳ ಪ್ರಯಾಣ ದರ ಹೆಚ್ಚಳ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಂಚರಿಸುವ ಆಟೊ ರಿಕ್ಷಾಗಳ ಪ್ರಯಾಣ ದರವನ್ನು ಡಿ.1ರಿಂದ ಅನ್ವಯಗೊಳ್ಳುವಂತೆ ಪರಿಷ್ಕರಿಸಿ ದ.ಕ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.
ಕನಿಷ್ಟ ದರ ಮೊದಲ ಒಂದುವರೆ ಕಿ.ಮೀ.ಗೆ 35 ರೂ., ನಂತರದ ಪ್ರತೀ 1 ಕಿ.ಮೀ. 20 ರೂ. ಆಗಿರುತ್ತದೆ. ಮೊದಲ 15 ನಿಮಿಷಗಳವರೆಗೆ ಕಾಯುವ ದರವಿರುವುದಿಲ್ಲ. ಅದು ಉಚಿತವಾಗಿರುತ್ತದೆ.ಬಳಿಕದ 15 ನಿಮಿಷಕ್ಕೆ 5 ರೂ. ಪಾವತಿಸಬೇಕಿದೆ.
ಪ್ರತೀ 20 ಕೆಜಿ ಲಗೇಜ್ ಉಚಿತವಾಗಿರುತ್ತದೆ. ಹೆಚ್ಚುವರಿ 10 ಕೆಜಿಗೆ 5 ರೂ. ಪಾವತಿಸಬೇಕಿದೆ. ರಾತ್ರಿ 10ರಿಂದ ಮುಂಜಾನೆ 5ರವರೆಗೆ ಪರಿಷ್ಕೃತ ದರದ ಒಂದುವರೆ ಪಟ್ಟು ಹೆಚ್ಚು ತೆಗೆದುಕೊಳ್ಳಬಹುದಾಗಿದೆ. ಡಿ.1ರಿಂದ ತಿಂಗಳೊಳಗೆ ಮೀಟರ್‌ಗಳನ್ನು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು.
ಪ್ರತೀ ರಿಕ್ಷಾದಲ್ಲೂ ದರದ ಪಟ್ಟಿಯನ್ನು ಅಳವಡಿಸಬೇಕು. ಪ್ರಯಾಣಿಕರು ಸೂಚಿಸಿದ ಸ್ಥಳಕ್ಕೆ ಹೋಗಲು ಚಾಲಕರು ನಿರಾಕರಿಸಿದಲ್ಲಿ, ಸಾರ್ವಜನಿಕರಲ್ಲಿ ಅನುಚಿತವಾಗಿ ವರ್ತಿಸಿದಲ್ಲಿ ಪೊಲೀಸ್ ಇಲಾಖೆಯು ಕ್ರಮ ಜರಗಿಸಬೇಕು.
ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡಿದರೆ ದೂ.ಸಂ: 0824-2220577/08251-230729/08255-280504ಕ್ಕೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
