ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ‘ನಗೆಹಬ್ಬ’

ಉಜಿರೆ, ಫೆ.4: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ಖ್ಯಾತ ಹಾಸ್ಯ ಕಲಾವಿದ ಪಟ್ಟಾಭಿರಾಮ ಸುಳ್ಯ ಅವರು ನಡೆಸಿಕೊಟ್ಟ ನಗೆಹಬ್ಬ ಕಾರ್ಯಕ್ರಮವು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು.
ತಮ್ಮ ಅದ್ಭುತವಾದ ಮಿಮಿಕ್ರಿ ಕಲೆಯ ಮೂಲಕ ಹಾಸ್ಯಲೋಕಕ್ಕೆ ಕರೆದೊಯ್ದರು. ದೈನಂದಿನ ಜೀವನದಲ್ಲಿ ಕೇಳಿಬರುವ ಸೈರನ್ ಸದ್ದು, ಆ್ಯಂಬುಲೆನ್ಸ್, ವಿಮಾನ ಮುಂತಾದ ವಾಹನಗಳ ಸದ್ದಿನೊಂದಿಗೆ ಹಕ್ಕಿಗಳ ಕಲರವ, ಹಸು, ಕೋಗಿಲೆ, ಕಾಗೆ, ಕೋಳಿ ಇನ್ನಿತರ ಪ್ರಾಣಿ ಪಕ್ಷಿಗಳ ಕೂಗು, ಮಕ್ಕಳ ಮಾತಿನ ಶೈಲಿ, ಚಿಕ್ಕ ಮಕ್ಕಳ ಅಳು ಮತ್ತು ನಗುವನ್ನು ವಿನೂತನವಾಗಿ ಸಾದರಪಡಿಸುವ ಮೂಲಕ ನೆರೆದಿದ್ದ ಕಲಾಪ್ರೇಮಿಗಳನ್ನು ರಂಜಿಸಿದರು.
ವಿವಿಧ ಸನ್ನಿವೇಶಗಳಲ್ಲಿ ವ್ಯಕ್ತವಾಗುವ ಮುಖಭಾವಗಳನ್ನು ನವರಸಗಳ ಮೂಲಕ ತೋರ್ಪಡಿಸಿದರು. ತನ್ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ಕನ್ನಡದ ಪ್ರಮುಖ ರಾಜಕೀಯ ನಾಯಕರ ಮತ್ತು ಸಾಹಿತಿಗಳ ಮುಖಭಾವ ಮತ್ತು ವೇಷಭೂಷಣ ಧರಿಸಿ ಮಿಮಿಕ್ರಿಯೊಂದಿಗೆ ಅಭಿನಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸ್ಮರಣ ಸಂಚಿಕೆ ಸಮಿತಿಯ ಸಹಸಂಚಾಲಕ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಪಟ್ಟಾಭಿರಾಮ ಸುಳ್ಯ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಸಾಂಸ್ಕೃತಿಕ ಸಮಿತಿಯ ಸದಸ್ಯೆ ವಿದ್ಯಾಶ್ರೀ ಅಡೂರು ಕಾರ್ಯಕ್ರಮ ನಿರೂಪಿಸಿದರು.
