ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಲ್ಲಿ ಯಾವುದೇ ಗೊಂದಲವಿಲ್ಲ : ಸಂತೋಷ್ ರೈ ಬೋಳಿಯಾರ್
ಉಳ್ಳಾಲ : ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಲ್ಲಿ ಯಾವುದೇ ಗೊಂದಲವಿಲ್ಲ, ಒಮ್ಮತದ ಅಭ್ಯರ್ಥಿ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಧ್ಯೇಯವಾಗಿದೆ, ಕಾರ್ಯಕರ್ತರು ನೋವಿನಿಂದ ಇದ್ದಲ್ಲಿ ನೇರ ಬಂದು ತಿಳಿಸಿ, ಸೂಕ್ತ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸುವುದೇ ಮಂಗಳೂರು ಮಂಡಲ ಬಿಜೆಪಿಯ ಗುರಿಯಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.
ಮುಡಿಪು ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಮಂಗಳೂರು ಕ್ಷೇತ್ರದಲ್ಲಿ ತಾನು ಕೂಡ ಪ್ರಬಲ ಅಪೇಕ್ಷಿತ ನಾಯಕನಾಗಿದ್ದೆನು. ಅಭ್ಯರ್ಥಿ ಘೋಷಣೆಯಾದ ನಂತರ ಸಾವಿರದಷ್ಟು ಕಾರ್ಯಕರ್ತರು ಮನೆಯಂಗಳಕ್ಕೆ ಬಂದು ತನಗೆ ಸೀಟು ಸಿಗದ ನೋವನ್ನು ತೋಡಿಕೊಂಡರು. ಪ್ರತಿಭಟನೆಯ ಸುಳಿವನ್ನು ನೀಡಿದರು. ಆದರೆ ರಾಜ್ಯಾಧ್ಯಕ್ಷರ ಊರಿನಲ್ಲಿ ಯಾವುದೇ ಗೊಂದಲಗಳಾಗಬಾರದು ಅನ್ನುವ ಉದ್ದೇಶದಿಂದ ಕಾರ್ಯಕರ್ತರನ್ನು ಸಮಾಧಾನಿಸಿ ಬಾಕಿ ಕಡೆಯಲ್ಲಿ ಬಂಡಾಯದ ಅಲೆ ಇದ್ದರೂ ಇಲ್ಲಿ ಇಲ್ಲದಂತೆ ಮಾಡುವಲ್ಲಿ ಸಫಲನಾಗಿರುವೆನು. ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ತಲುಪಿಸುವ ಉದ್ದೇಶದಿಂದ ಒಗ್ಗಟ್ಟಿನ ಸುದ್ಧಿಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ.
ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 61,000ಕ್ಕಿಂತ ಅಧಿಕ ಮತಗಳು ಪಡೆದು ಕಾಂಗ್ರೆಸ್ ಪ್ರಬಲ ಪೈಪೋಟಿಯನ್ನು ನೀಡಿದ್ದೇವೆ. ಅಲ್ಪಸಂಖ್ಯಾತ ಮತಗಳು ಹೆಚ್ಚಿದ್ದ ಹಿನ್ನೆಲೆಯಲ್ಲಿ ಸೋಲು ಕಂಡಿದ್ದೆವು. ಆದರೆ ಅಂದು ರಾತ್ರಿಯಿಂದ ಸರಿಯಾಗಿ ನಿದ್ರೆ ಮಾಡದೆ ನಾಲ್ಕೂವರೆ ವರ್ಷದವರೆಗೆ ಪಕ್ಷಕ್ಕಾಗಿ ದುಡಿದು ಮಂಗಳೂರು ಕ್ಷೇತ್ರದಿಂದ ಬಿಜೆಪಿ ಶಾಸಕನನ್ನು ವಿಧಾನಸೌಧಕ್ಕೆ ಕಳುಹಿಸಿದ ನಂತರವೇ ನಿದ್ರೆ ಮಾಡುವ ಛಲವನ್ನು ಇಟ್ಟು ಅಭ್ಯರ್ಥಿ ಸತೀಶ್ ಕುಂಪಲ ಜಯಗಳಿಸಲು ಹಗಲು ರಾತ್ರಿ ದುಡಿಯುತ್ತೇವೆ., ಗೆಲ್ಲುವ ಉದ್ದೇಶದಿಂದಲೇ 2 ವರ್ಷಗಳ ಹಿಂದೆ ಚುನಾವಣಾ ಕಾರ್ಯಾಲಯ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಉದ್ಘಾಟಿಸಿ,ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಅಭ್ಯರ್ಥಿಯಾಗಬೇಕು ಅನ್ನುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಚುನಾವಣೆಗೆ ಬೇಕಾದ ಎಲ್ಲಾ ತಯಾರಿಯನ್ನು ಮಾಡುತ್ತಾ ಬಂದಿದ್ದೇವೆ. ಕೋಟ್ಯಂತರ ರೂ. ವ್ಯಯಿಸಿದ್ದೇವೆ.ರಾಜ್ಯಾಧ್ಯಕ್ಷರು, ಹೈಕಮಾಂಡ್ ಕರೆದು ಸೀಟು ಬಿಟ್ಟು ಕೊಡಲು ಕೇಳಿದಂತೆ ನೀಡಿದ್ದೇನೆ.
ಮಾತಿಗೆ ಗೌರವ ನೀಡಿ, ಪಕ್ಷದ ಸೈದ್ಧಾಂತಿಕ ಚೌಕಟ್ಟು ಮೀರದೆ ಬಿಟ್ಟುಕೊಟ್ಟಿದ್ದೇವೆ,ಸತೀಶ್ ಕುಂಪಲ ಯೋಗ್ಯವಾದ ಅಭ್ಯರ್ಥಿ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಗುರಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಮಾಧ್ಯಮಗಳಲ್ಲಾಗಲಿ ಅಭ್ಯರ್ಥಿ ಪರವಾಗಿಯೇ ಪಕ್ಷದ ಕಾರ್ಯಕರ್ತರನ್ನು ನೀಡುವಂತೆ ಸೂಚಿಸಿದ್ದೇನೆ. ನೋವು ತಿಳಿಸಿದರೆ ಬೆನ್ನಿಗೆ ಚೂರಿ ಹಾಕಿದಂತೆ ಎಂದು ಸಮಾಧಾನಿಸಿ ಎಲ್ಲರನ್ನೂ ಒಗ್ಗಟ್ಟಾಗಿ ದುಡಿಯುವಂತೆ ಪ್ರೇರೇಪಿಸಿದ್ದೇನೆ. ಒಮ್ಮೆಯಾದರೂ ಮಂಗಳೂರು ಕ್ಷೇತ್ರದಿಂದ ಬಿಜೆಪಿ ಶಾಸಕ ವಿಧಾನಸೌಧಕ್ಕೆ ಪ್ರವೇಶಿಸಬೇಕಿದೆ. ಸೀಟಿಗೆ ಅಪೇಕ್ಷೆ ಪಡೆಯುವುದು ತಪ್ಪಿಲ್ಲ , 32 ವರ್ಷ ದುಡಿದವನಿಗೆ 1 ತಿಂಗಳು ದುಡಿಯುವುದು ದೊಡ್ಡವೇನಲ್ಲ. ತಪ್ಪು ಸಂದೇಶಗಳಿಗೆ ಕಿವಿಗೊಡದೆ ರಾತ್ರಿ ಹಗಲು ದುಡಿದು ಸತೀಶ್ ಕುಂಪಲ ಜಯಿಸುವುದು ಖಂಡಿತ ಎಂದರು.ಸುದ್ಧಿಗೋಷ್ಠಿಯಲ್ಲಿ ಅಭ್ಯರ್ಥಿ ಸತೀಶ್ ಕುಂಪಲ, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ರವೀಂದ್ರ ಶೆಟ್ಟಿ ಉಳಿದೊಟ್ಟು, ಅನಿಲ್ ದಾಸ್, ಜಯಶ್ರೀ ಕರ್ಕೇರ, ಹೇಮಂತ್ ಶೆಟ್ಟಿ ದೇರಳಕಟ್ಟೆ, ನವೀನ್ ಪಾದಲ್ಪಾಡಿ, ಯಶವಂತ ಅಮೀನ್, ವಿಸ್ತಾರಕ ಮಧುಸೂದನ್, ಆನಂದ್ ಶೆಟ್ಟಿ ಭಟ್ನಗರ, ರವಿಶಂಕರ್ ಸೊಮೇಶ್ವರ, ಗಣೇಶ್ ಸುವರ್ಣ ಉಪಸ್ಥಿತರಿದ್ದರು.