ಸತೀಶ್ ಜಾರಕಿಹೊಳಿ ಹಿಂದೂ ವಿರುದ್ಧದ ಹೇಳಿಕೆಗೆ ಖಂಡನೆ : ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ
ಪುತ್ತೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ವಿರುದ್ಧದ ಹೇಳಿಕೆಯ ಮೂಲಕ ಕಾಂಗ್ರೆಸ್ ಮಾನಸಿಕತೆ ಜಗತ್ತಿಗೇ ಗೊತ್ತಾಗಿದೆ. ಇಂತಹ ದ್ರೋಹಿಗಳ ಮಂಪರು ಪರೀಕ್ಷೆ ಮಾಡಬೇಕು. ಇದರ ಹಿಂದಿನ ಉದ್ದೇಶ, ಮುಖಗಳ ಕುರಿತು ತನಿಖೆ ಆಗಬೇಕು ಎಂದು ರಾಜ್ಯ ಗೃಹ ಸಚಿವರಿಗೆ ಆಗ್ರಹಿಸುವುದಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಪುತ್ತೂರು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ನಗರ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೂ ಎನ್ನುವ ಸಂಸ್ಕೃತಿಯಿಂದ ಹಿಂದೂಸ್ತಾನವಾಗಿದೆ. ಕಾಂಗ್ರೆಸ್ ಸಂಸ್ಕೃತಿ ಅಖಂಡ ನಾಡು, ದೇಶವನ್ನು ಒಡೆಯುವ ಸಂಸ್ಕೃತಿ ಎಂಬುದು ಮತ್ತೆ ಮತ್ತೆ ಸಾಭೀತಾಗುತ್ತಿದೆ ಎಂದು ಮಠಂದೂರು ಹೇಳಿದರು.
ಭಜರಂಗದಳ ಮುಖಂಡ ಮುಳೀಕೃಷ್ಣ ಹಸಂತಡ್ಕ ಮಾತನಾಡಿ, ಜಗತ್ತಿಗೇ ಮಾನವೀಯ ಪಾಠ ಮಾಡಿದ ಧರ್ಮ ಹಿಂದೂ ಧರ್ಮ. ದೇಶದ ಅಸ್ಮಿತೆಯ ಹಿಂದೂ ಧರ್ಮವನ್ನು ತನ್ನ ತೆವಳಿಗಾಗಿ ಹೀಯಾಳಿಸಿದ ಸತೀಶ್ ಜಾರಕಿಹೊಳಿಯನ್ನು ಇನ್ನೂ ಬಂಧಿಸಿಲ್ಲ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣ ಪ್ರಸನ್ನ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಯೋಜಿತ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್,ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ,ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.