ಶಾಲಾ ಪ್ರಾರಂಭೋತ್ಸವದಲ್ಲಿ ಉಡುಪಿ ಡಿಸಿ ಕೂರ್ಮಾರಾವ್ ಎಂ. ಭಾಗಿ

ಉಡುಪಿ : ಉಡುಪಿಯಲ್ಲಿ ಮೇ 29 ರಿಂದ ಶಾಲೆಗಳು ತೆರೆದುಕೊಂಡಿದ್ದು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳು ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನಿರ್ವಹಿಸಿದರು. ಮೇ 31 ರಂದು ತರಗತಿಗಳು ಆರಂಭಗೊಂಡು, ಬೇಸಿಗೆ ರಜೆಯನ್ನು ಮುಗಿಸಿ ಬಂದ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಗಿತ್ತು. ವಿಶೇಷವೆಂಬಂತೆ ಜಿಲ್ಲೆಯ ಹಲವು ಶಾಲೆಗಳಲ್ಲಿ ತೋರಣ, ರಂಗೋಲಿ ಹಾಕಿ ಮಕ್ಕಳನ್ನು ಬರಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಬೆಳಪುವಿನಲ್ಲಿರುವ ಸರಕಾರಿ ಸಂಯುಕ್ತ ಪ್ರೌಡಶಾಲೆಯಲ್ಲಿ ಬುಧವಾರದಂದು ನಡೆದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿದರು.