ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಮಣ್ಣಿನ ದಿನಾಚರಣೆ
ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ವಿಶ್ವ ಮಣ್ಣಿನ ದಿನಾಚರಣೆಯನ್ನು
ಆಚರಿಸಲಾಯಿತು. ಮಣ್ಣಿನ ಪ್ರಾಮುಖ್ಯತೆ ಮತ್ತು ಪರೀಕ್ಷಾ ವಿಧಾನವನ್ನು ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಾಯಿತು.
ಕಾರ್ಯಕ್ರಮವನ್ನು ಶ್ರೀ.ಧ.ಮಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ ಕುಮಾರ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳಲ್ಲಿ ಒಂದಾದ ಮಣ್ಣು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಪೌರಾಣಿಕ ಹಿನ್ನೆಲೆ ಹೊಂದಿರುವ ಮಣ್ಣನ್ನು ಜನರು
ದೇವರ ರೂಪದಲ್ಲಿ ಕಾಣುತ್ತಾರೆ. ಈ ಅಮೂಲ್ಯ ಸ್ವತ್ತನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಶ್ರೀ.ಧ.ಮಂ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಡಾ.ವಿಶ್ವನಾಥ ಪಿ. ಮಾತನಾಡಿದರು.
ಮನುಷ್ಯನ ದುರಾಸೆಯಿಂದ ಭೂಮಿಯ ಮೇಲೆ ಶೋಷಣೆಯಾಗುತ್ತಿದೆ ಇದರಿಂದ ಮಣ್ಣು ಸವಕಳಿಯಾಗುತ್ತಿದೆ ಹೀಗಾಗಿ ಮಣ್ಣಿನ ಸವಕಳಿ ತಡೆಗಟ್ಟುವ ಕಾರ್ಯವನ್ನು ಮಾಡಬೇಕಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಮಣ್ಣಿನ ಕುರಿತು ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಭಿತ್ತಿ ಪತ್ರವನ್ನು ಅನಾವರಣಗೊಳಿಸಲಾಯಿತು. ಎಸ್.ಡಿ.ಎಂ ಮಣ್ಣು ಪರೀಕ್ಷಾ ಸಂಸ್ಥೆಯ ವಿಶ್ಲೇಷಕರಾದ ರಂಜಿತ್ ಮಣ್ಣಿನ ಪೋಷಕಾಂಶಗಳ ಪರೀಕ್ಷಾ ವಿಧಾನ ಮತ್ತು ಸೂಕ್ತ ಬಳಕೆಯ ಕುರಿತು ಮಾಹಿತಿ ನೀಡಿದರು. ರಸಾಯನ ಶಾಸ್ತ್ರ ವಿಭಾಗದಮುಖ್ಯಸ್ಥರಾದ ನಂದಕುಮಾರಿ ಕೆ.ಪಿ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಎಮೀಲಿಯಾ ನಿರೂಪಿಸಿದರೆ, ಸಾಧನಾ ಸ್ವಾಗತಿಸಿ ಸ್ವಸ್ಥಿಕಾ ವಂದಿಸಿದರು.