“ಸಾಮಾಜಿಕ ಕ್ರಾಂತಿಯ ನಂದಾದೀಪ ಬಸವಣ್ಣ”

ಉಜಿರೆ, ಫೆ.4: ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ‘ಹರಿಕಥೆ’ ನೆರೆದಿದ್ದವರ ಗಮನ ಸೆಳೆಯಿತು.

ತೋನ್ಸೆ ಪುಷ್ಕಳ ಕುಮಾರ್ ಮತ್ತು ಬಳಗದವರು ‘ಜಗಜ್ಯೋತಿ ಬಸವಣ್ಣ’ ಕಥಾಕೀರ್ತನ ಪ್ರಸ್ತುತಪಡಿಸಿದರು.

ಬಸವಣ್ಣನವರ ಬಾಲ್ಯದ ಜೀವನದಿಂದ ಆರಂಭವಾದ ಹರಿಕಥೆಯಲ್ಲಿ ಅವರ ತತ್ತ್ವಗಳನ್ನು ಹೇಳಲಾಯಿತು. ಬಾಲಕನಾಗಿರುವಾಗಲೇ ಅವರ ಬ್ರಹ್ಮೋಪದೇಶ ಸಂದರ್ಭದಲ್ಲಿ ಹುಟ್ಟಿಕೊಂಡ ಆಚರಣೆಗಳ ಬಗೆಗಿನ ಪ್ರಶ್ನೆ ಮತ್ತು ಅಂದೇ ಅವರು ಸಮಾಜದಲ್ಲಿ ಇಂತಹ ಪದ್ಧತಿಗಳ ಸುಧಾರಣೆಯನ್ನು ತರಬೇಕು ಎಂಬ ನಿರ್ಧಾರ ತೆಗೆದುಕೊಂಡ ಸನ್ನಿವೇಶವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಜೊತೆಗೆ ಅವರ ತತ್ತ್ವಗಳನ್ನು ವಚನಗಳನ್ನು ಹೇಳುವುದರ ಮೂಲಕ ಜನರಲ್ಲಿ ಅರಿವು ಮೂಡಿಸಿದರು.

ಸಮಾಜದಲ್ಲಿ ಕಾಣುವ ತಪ್ಪುಗಳನ್ನು ಪರಿಗಣಿಸಿ ಬಸವಣ್ಣನವರು ತಮ್ಮ ಬರವಣಿಗೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ನಿರ್ಧರಿಸಿದರು. ಮತ್ತು ವಚನಗಳಲ್ಲಿ ಜೀವನದ ಮೌಲ್ಯಗಳನ್ನು  ಉಲ್ಲೇಖಿಸುವುದರ ಮೂಲಕ ಸಮಾಜದಲ್ಲಿ ಸುಧಾರಣೆ ತರುವತ್ತ ಹೆಜ್ಜೆಯಿಟ್ಟರು ಎಂದು ಹರಿಕಥೆಯಲ್ಲಿ ಹೇಳಲಾಯಿತು.

ಬಸವಣ್ಣನವರ ಜ್ಞಾನವನ್ನು ಕಂಡು ಬಿಜ್ಜಳ ರಾಜ ಅವರನ್ನು ಗಣಕಾಧಿಕಾರಿಯನ್ನಾಗಿ ನೇಮಿಸಿದರು. ನಂತರ ಅವರ ಕಾರ್ಯವೈಖರಿಯನ್ನು ಪರಿಗಣಿಸಿ ಪ್ರಧಾನಮಂತ್ರಿಯನ್ನಾಗಿ ನೇಮಿಸಿದ್ದು ಅವರ ಸಮಾಜ ಸುಧಾರಣಾ ಕಾರ್ಯಕ್ಕೆ ಇನ್ನಷ್ಟು ಸಹಕಾರಿಯಾಯಿತು ಎಂದು ತಿಳಿಸಿದರು.

“ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ..” ವಚನವನ್ನು ಪ್ರಸ್ತುತಪಡಿಸಿ, ಸಮಾಜದಲ್ಲಿ ಸುಧಾರಣೆಯಾಗಬೇಕಿದ್ದರೆ ಮಾನವ ಮೊದಲಿಗೆ ತನ್ನಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಹೀಗಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ಉದಾಹರಣೆ ಸಹಿತವಾಗಿ ಜನರಿಗೆ ಮನದಟ್ಟು ಮಾಡುವಲ್ಲಿ ಕಲಾವಿದರು ಯಶಸ್ವಿಯಾದರು.

ಬಸವಣ್ಣ ಸಾಮಾಜಿಕ ಕ್ರಾಂತಿಯ ನಂದಾದೀಪ. ಅವರು ತಿಳಿಸಿದ ಜೀವನ ಮೌಲ್ಯಗಳು ಮತ್ತು ತತ್ತ್ವಗಳು ಎಲ್ಲರಿಗೂ ಮಾದರಿ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ಒಂದು ಗಂಟೆ ಕಾಲ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ತೋನ್ಸೆ ಪುಷ್ಕಳ ಕುಮಾರ್‌ ಅವರಿಗೆ ತಬಲ ವಾದನದಲ್ಲಿ ಶರತ್ ಹಾಗೂ ಹಾರ್ಮೋನಿಯಂನಲ್ಲಿ ರವಿರಾಜ್ ಸಾಥ್ ನೀಡಿದರು. ಸಾಂಸ್ಕೃತಿಕ ಸಮಿತಿ ಸದಸ್ಯೆ ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಪ್ರೀತಿ ಹಡಪದ

ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ಚಿತ್ರ: ಕೌಶಿಕ್ ಹೆಗಡೆಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

Related Posts

Leave a Reply

Your email address will not be published.