ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಉದಯರಾಗದೊಂದಿಗೆ ಎರಡನೇ ದಿನ ಆರಂಭ

ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯುತ್ತಿರುವ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವು ಉದಯರಾಗದೊಂದಿಗೆ ಆರಂಭಗೊಂಡಿತು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಲಾವಿದರು ಕರ್ನಾಟಕ ಸಂಗೀತದ ರಸಧಾರೆಯೊಂದಿಗೆ ಭಕ್ತಿಸುಧೆಯನ್ನು ಹರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧವಾಗಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೂಂಡ ಕೃತಿಗಳನ್ನು ಆಧರಿಸಿ ಬೆಂಗಳೂರಿನ ಅದಿತಿ ಪ್ರಹ್ಲಾದ ಹಾಗೂ ಮಂಗಳೂರಿನ ಮೇಧಾ ಉಡುಪ ಗಾಯನ ಪ್ರಸ್ತುತಪಡಿಸಿದರು.
“ಪ್ರಥಮದಲಿ ವಂದಿಸುವೆ..” ಗೀತೆಯೊಂದಿಗೆ ಸಂಗೀತ ಕಛೇರಿ ಪ್ರಾರಂಭವಾಯಿತು. ಬಳಿಕ “ಕರುನಾಳು ಪರಮೇಶ..” ಎಂಬ ರೇವತಿ ರಾಗದ ರೂಪಕ ತಾಳದಲ್ಲಿನ ವಿದ್ವಾನ್ ಎಂ. ನಾರಾಯಣರಾವ್ ವಿರಚಿತ ಭಕ್ತಿಗೀತೆಯನ್ನು ಇಂಪಾಗಿ ಹಾಡಿದರು.
ಶತಾವಧಾನಿ ಆರ್. ಗಣೇಶ್ ವಿರಚಿತ, ಡಾ. ರಾಜಕುಮಾರ್ ಭಾರತಿ ರಾಗ ಸಂಯೋಜಿಸಿರುವ ಶ್ರೀ ಮಂಜುನಾಥಸ್ವಾಮಿ ಎಂಬ ಗೀತೆಯನ್ನು (ಆದಿತಾಳದ ತೋಡಿ ರಾಗ) ಪ್ರಸ್ತುತಪಡಿಸಿದರು. “ಕಾಮಿನಿ ಕರೆದಾರೆ..” ಎಂಬ ದ್ವಿಜವತಿ ರಾಗದ ಮಿಶ್ರ ತಾಳದ ಗೀತೆಯನ್ನು ಹಾಡಿದರು.
ಮಂಗಳ ಗೀತೆಯಾಗಿ ಆದಿತಾಳದ ಮಧ್ಯವತಿ ರಾಗದ “ಧರೆಯೊಳು ಹೆಸರಾಂತ..” ಎಂಬ ಹಾಡನ್ನು ಪ್ರಸ್ತುತಪಡಿಸಿದರು. ಈ ಗೀತೆಯ ಮೊದಲ ಚರಣವನ್ನು ಹೆಸರಾಂತ ಯಕ್ಷಗಾನ ಭಾಗವತ ಮಂಜುನಾಥ ಭಾಗವತ ರಚಿಸಿದರೆ, ನಂತರದ ಆರು ಚರಣಗಳನ್ನು ಮುರುಳೀಧರ್ ಭಟ್ ಕಟೀಲು ಬರೆದಿದ್ದಾರೆ.
ಗಾಯನಕ್ಕೆ ವಯೋಲಿನ್ ನಲ್ಲಿ ಬೆಂಗಳೂರಿನ ಕಾರ್ತಿಕೇಯ ಆರ್. ಹಾಗೂ ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಸಾಥ್ ನೀಡಿದರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ನಿತ್ಯಾನಂದ ರಾವ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಕೋಶಾಧಿಕಾರಿ ಐತಾಳ್ ನಾಯ್ಕ ಸನ್ಮಾನಿಸಿದರು.