ಸೋಲಿನ ಕಲಿಕೆಯಿಂದ ಗೆಲುವು ನಿಶ್ಚಿತ- ಮುರಳಿ ಕೃಷ್ಣ

ಉಜಿರೆ: ಜೀವನದಲ್ಲಿ ಎಲ್ಲಾ ರೀತಿಯ ಅನುಭವಗಳು ಅಗತ್ಯ. ಅನುಭವಗಳ ಕೊರತೆ ಇದ್ದಾಗ ಮಾತ್ರ ಸೋಲು ಎದುರಾಗುತ್ತದೆ. ಆದರೆ, ಅಂತಹ ಸೋಲುಗಳಿಂದ ಕಲಿತು ಜೀವನಕ್ಕೆ ಅಳವಡಿಸಿಕೊಳ್ಳುವುದು ಬಹಳಷ್ಟಿದೆ ಎಂದು, ಅಮೇಜಾನ್ ವೆಬ್ ಸರ್ವಿಸ್ ಸಂಸ್ಥೆಯ ಹಿರಿಯ ಪ್ರಧಾನ ಅಭಿಯಂತರ, ಮುರಳಿ ಕೃಷ್ಣ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎಸ್ ಡಿ ಎಂ ಪದವಿ ಕಾಲೇಜಿನ ಬಿ.ವೋಕ್ ಸಾಫ್ಟವೇರ್ ಮತ್ತು ಅಪ್ಲಿಕೇಷನ್ ಡೆವೆಲಪ್ಮೆಂಟ್ ವಿಭಾಗ ಆಯೋಜಿಸಿದ್ದ ರಾಜ್ಯ ಮಟ್ಟದ ಟೆಕ್ನೋಫಿಲಿಯಾ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯ ಸಮಯದಲ್ಲಿ ಪಠ್ಯದೊಂದಿಗೆ ಪ್ರಾಯೋಗಿಕ ಅನುಭವಗಳೂ ಅಗತ್ಯವಾಗುತ್ತವೆ. ಇಂತಹ ಪ್ರಾಯೋಗಿಕ ಕಲಿಕೆಗಳಿಗೆ ಬಿ.ವೋಕ್‌ಗಳಂತಹ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತವೆ. ಜೊತೆಗೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಗೆಲುವೊಂದೇ ಉತ್ತರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಿಭಾಗ ಮುಖ್ಯಸ್ಥ ಶೈಲೇಶ್ ಕುಮಾರ್ ಮಾತನಾಡಿ, ಇಂದಿನ ತನಕ ಬಹುತೇಕ ಎಲ್ಲಾ ವಿಷಯಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳನ್ನು ಸೃಷ್ಠಿಸಿ ಆಗಿದೆ, ಆದರೆ ಆ ಎಲ್ಲಾ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಇನ್ನೂ ಬಾಕಿ ಇವೆ, ಅವುಗಳನ್ನು ಅಭಿವೃದ್ಧಿಗೊಳಿಸುವ ಸವಾಲು ಮತ್ತು ಕ್ರಿಯಾತ್ಮಕತೆಯನ್ನು ಉಪಯೋಗಿಸಿಕೊಳ್ಳುವ ಅವಕಾಶ ಇಂದಿನ ಯುವಜನತೆಯ ಮುಂದಿದೆ ಎಂದು ಹೇಳಿದರು.
ಇಂದಿನ ಪೀಳಿಗೆ ಸಂಪೂರ್ಣವಾಗಿ ತಂತ್ರಜ್ಞಾನದ ಕಡೆಗೆ ಒಲವು ತೋರಿಸುತ್ತಿದೆ. ಈ ಕ್ಷೇತ್ರದಲ್ಲಿ ಯುವ ಪೀಳಿಗೆಗಳಿಗೆ ಅತ್ಯಂತ ಹೆಚ್ಚು ಅವಕಾಶಗಳು ಹುಟ್ಟಿಕೊಳ್ಳುತ್ತಿವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್. ಡಿ. ಎಂ. ಕಾಲೇಜಿನ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಶಾಂತಿಕುಮಾರ್ ಮಾತನಾಡಿದರು.
ಕಾರ್ಯಕ್ರಮವನ್ನು ಬಿ.ವೋಕ್ ವಿದ್ಯಾರ್ಥಿಗಳಾದ ದರ್ಶನ್ ಮತ್ತು ವರ್ಷಿನಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು, ಬಿ.ವೋಕ್ ವಿಭಾಗದ ಸಂಯೋಜಕ ಸುವೀರ್ ಜೈನ್ ಸ್ವಾಗತಿಸಿ, ವಿಭಾಗದ ಸಹಾಯಕ ಪ್ರಾದ್ಯಾಪಕಿ ಐಶ್ವರ್ಯ ಕೆ. ವಂದಿಸಿದರು