ಸಂಪನ್ಮೂಲಗಳ ಸದ್ಬಳಕೆಯಿಂದ ರಾಷ್ಟ್ರದ ಉನ್ನತಿ: ಡಾ.ಕಿಶೋರ್ ಕುಮಾರ್ ಸಿ.ಕೆ

ಉಜಿರೆ: ಯಾವುದೇ ದೇಶದ ಆರ್ಥಿಕ ಬಿಕ್ಕಟ್ಟು ಆಯಾ ದೇಶದ ಸಂಪನ್ಮೂಗಳ ಮೇಲೆ ಅವಲಂಬಿತವಾಗಿರುತ್ತವೆ. ಲಭ್ಯವಿರುವ ಸಂಪನ್ಮೂಲಗಳನ್ನು ಹೇಗೆ ಸದುಪಯೋಗಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ರಾಷ್ಟ್ರದ ಉನ್ನತಿ ನಿರ್ಧಾರವಾಗುತ್ತದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಮಂಗಳಗಂಗೋತ್ರಿಯ ಕುಲಸಚಿವರು ಡಾ.ಕಿಶೋರ್ ಕುಮಾರ್ ಸಿ.ಕೆ ಹೇಳಿದರು.

ಉಜಿರೆಯ ಎಸ್.ಡಿ.ಎಂ ಕಾಲೇಜು ಹಾಗೂ ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ಅರ್ಥಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ ಗುರುವಾರದಂದು ಸಮ್ಯಕ್ ದರ್ಶನ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ “ವಲ್ರ್ಡ್ ಎಕಾನಾಮಿಕ್ ಕ್ರೈಸಿಸ್: ಲರ್ನಿಂಗ್ಸ್ ಆ್ಯಂಡ್ ವೇ ಔಟ್” ಎಂಬ ರಾಜ್ಯಮಟ್ಟದ ಸಮ್ಮೇಳನದಲ್ಲಿ ಉದ್ಘಾಟಕರಾಗಿ ಮಾತನಾಡಿದರು. ನೈಸರ್ಗಿಕವಾಗಿ ಶ್ರೀಮಂತವಾಗಿರುವ ನಮ್ಮ ದೇಶದಲ್ಲಿ ಕಲ್ಲು, ಮಣ್ಣು, ಕಲ್ಲಿದ್ದಲುಗಳ ಜೊತೆಗೆ ಮಾನವ ಸಂಪನ್ಮೂಲವೂ ಹೇರಳವಾಗಿವೆ. ಜಗತ್ತಿನ ಇತರೆ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ. ಆದರೆ ಭಾರತವು ಸಂಪತ್ಭರಿತ ರಾಷ್ಟ್ರವಾಗಿದ್ದು ಆರ್ಥಿಕವಾಗಿ ಮುನ್ನಡೆಯುತ್ತಾ ಸಾಗಿದೆ ಎಂದು ಹೇಳಿದರು.

ಏಷ್ಯಾದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆಗಳು ಶೇ.ಇಪ್ಪತ್ತೆರಡರಿಂದ ಶೇ.ಇಪ್ಪತ್ತೈದರಷ್ಟಿದೆ. ಅಮೇರಿಕಾದಲ್ಲೂ ಶೇ.ನಲವತ್ತರಷ್ಟು ಕುಂಠಿತವಾಗುವ ಸಂಭವನೀಯತೆ ಇದೆ. ಆದರೆ ನಮ್ಮ ದೇಶದಲ್ಲಿ ಇದು ಶೂನ್ಯವಾಗಿದೆ. ಹೀಗಾಗಿ ನಾವು ಆರ್ಥಿಕವಾಗಿ ಸಬಲರಾಗಿದ್ದೇವೆ ಎಂದು ದಿನಪತ್ರಿಕೆಯ ಉಲ್ಲೇಖದೊಂದಿಗೆ ಮಾತನಾಡಿದರು. ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕ, ಸಣ್ಣ ಕಥೆಗಳ ಬರಹಗಾರ ಉಡುಪಿಯ ಶ್ರೀ. ಪ್ರೇಮ್ ಶೇಖರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಪನ್ಮೂಲಗಳ ಸದ್ಭಳಕೆ ಅತೀ ಅವಶ್ಯಕ ಎಂದರು. ಒಂದು ವೇಳೆ ನಾವು ಈ ವಿಚಾರದಲ್ಲಿ ಅಸಡ್ಡೆ ತೋರಿದರೆ ಮುಂದೆ ನಾವೇ ಪಶ್ಚಾತಾಪಪಡಬೇಕಾಗುತ್ತದೆ ಎಂದು ಅರ್ಥೈಸಿದರು.

ಇಂದಿನ ಸಮಾಜಕ್ಕೆ ಪ್ರಸ್ತುತವೆನಿಸುವ ವಿಷಯವನ್ನು ಆರಿಸಿಕೊಂಡು ಕಾರ್ಯಕ್ರಮವನ್ನು ಆಯೋಜಿಸಿರುವುದು ಖುಷಿಯ ವಿಚಾರ. ಇಂತಹ ಅರ್ಥಪೂರ್ಣ ಚಟುವಟಿಕೆಗಳು ಅರ್ಥಶಾಸ್ರ್ತ ವಿಭಾಗದಿಂದ ಇನ್ನಷ್ಟು ನೆರವೇರಲಿ ಎಂದು ಶುಭಹಾರೈಸಿ ಅಭಿನಂದಿಸಿದರು.
ವೈಯಕ್ತಿಕ ಬದುಕಿನಲ್ಲಿ ನಮ್ಮ ಖರ್ಚಿನ ಪ್ರಮಾಣ ಹಾಗೂ ಆದಾಯದ ಮೂಲವನ್ನು ತಾಳೆ ಹಾಕಿ ನೋಡಬೇಕು. ಇವುಗಳ ಆಧಾರದಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಯ ಮಟ್ಟ ನಿರ್ಧಾರವಾಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಉದಯಚಂದ್ರ ಪಿ.ಎನ್ ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಮತ್ತು ವಿಭಾಗದ ಮುಖ್ಯಸ್ಥ ಡಾ.ಎ. ಜಯಕುಮಾರ್ ಶೆಟ್ಟಿ ಹಾಗೂ ಸುಬ್ರಹ್ಮಣ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಶಶಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಮಹೇಶ್ ಕುಮಾರ್ ಶೆಟ್ಟಿ ವಂದಿಸಿ, ವಿದ್ಯಾರ್ಥಿಗಳಾದ ಧನ್ಯ ಹಾಗೂ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.