ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ “ಶಿವ ಚಿತ್ತಾರ”

ಉಡುಪಿ : ದೇವರನ್ನು ಯಾವುದೇ ರೂಪದಲ್ಲಿಯೂ ಭಕ್ತಿಯನ್ನು ಮಾಡಬಹುದು. ನಿಷ್ಕಲ್ಮಶ ಮನಸ್ಸಿನಿಂದ ಪರಿಶುದ್ಧವಾದ ಪ್ರೀತಿಯಿಂದ ಆ ಪರಶಿವನಿಗೆ ಏನೇ ಅರ್ಪಿಸಿದರೂ ಅದು ಭಕ್ತಿ ಎಂದಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ “ಶಿವ ಚಿತ್ತಾರ”. ಶಾಲಾ ಮಕ್ಕಳಲ್ಲಿ ಅಡಗಿರುವ ಕಲೆಯನ್ನು, ಸಕಲ ಕಲೆಗೆ ಮೂಲವಾಗಿರುವ ಶಿವನ ಮೂಲಕವೇ ಹೊರತರುವ ಒಂದೊಳ್ಳೆ ಕಲ್ಪನೆಯೇ “ಶಿವ ಚಿತ್ತಾರ”. ಪರಶಿವನ ಚಿತ್ರವನ್ನು ಮಕ್ಕಳ ಕೈಯಾರೆ ಬಿಡಿಸಿ ಅವರಲ್ಲಿರುವ ಚಿತ್ರಕಲೆ ಪ್ರತಿಭೆಯನ್ನು ಕಲೆ ಹಾಕುವ ಪುಟ್ಟ ಪ್ರಯತ್ನವಿದು.

ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಶಿವಪಾಡಿ, ಮಣಿಪಾಲ ಇವರ ವತಿಯಿಂದ ಅತಿರುದ್ರ ಮಹಾಯಾಗ ಪ್ರಯುಕ್ತ ಅತಿರುದ್ರ ಮಹಾಯಾಗ ಸಮಿತಿ ಪ್ರಾಯೋಜಕತ್ವದಲ್ಲಿ ಆರ್ಟಿಸ್ಟ್‌ ಫೋರಮ್‌ ಸಹಯೋಗದೊಂದಿಗೆ ಉಡುಪಿ ತಾಲೂಕು ಮಟ್ಟದ ಹಿರಿಯ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ “ಶಿವ ಚಿತ್ತಾರ” ಎಂಬ ಚಿತ್ರಕಲಾ ಸ್ಪರ್ಧೆಯನ್ನು ಫೆಬ್ರವರಿ 05, 2023 ರ ಭಾನುವಾರದಂದು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಣಿಪಾಲ ಬ್ರಹ್ಮಕುಮಾರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸೌರಭಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸುಸಂದರ್ಭದಲ್ಲಿ ಮಾತನಾಡಿದ ಅವರು, ‘ದೇವರ ಮೇಲಿನ ಅಪಾರ ಭಕ್ತಿಯನ್ನು ಕಲೆಯ ಮೂಲಕ ಭಗವಂತನಿಗೆ ಸಮರ್ಪಿಸಲು ಶಿವ ಚಿತ್ತಾರ ಚಿತ್ರಕಲಾ ಸ್ಪರ್ಧೆ ಒಂದು ಉತ್ತಮ ಮಾರ್ಗವಾಗಿದೆ. ಇದರಿಂದ ಮಕ್ಕಳಲ್ಲಿ ಕಲಾಸಕ್ತಿಯೊಂದಿಗೆ ಧಾರ್ಮಿಕ ಪ್ರಜ್ಞೆಯ ಉದ್ದೀಪನಗೊಳ್ಳಲಿದೆ. ಭಗವಂತನಿಗೆ ಪ್ರೀತಿ ಮತ್ತು ಭಕ್ತಿಯಿಂದ ಕಲೆಯನ್ನು ಸಮರ್ಪಿಸಿದಾಗ ನಮ್ಮೆಲ್ಲ ಕಾರ್ಯಗಳೂ ಯಶಸ್ವಿಯಾಗಲಿವೆ’ ಎಂದರು.

ಈ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳತಜ್ಞೆ ಡಾ. ಪುಷ್ಪಾ ಕಿಣಿ ಮಾತನಾಡಿ, ‘ವಿದ್ಯಾರ್ಥಿಗಳು ಪಾಠದೊಂದಿಗೆ ಕಲೆಗೆ ಪ್ರಾಶಸ್ತ್ಯ ನೀಡಿದಾಗ ಮನಸ್ಸು ಪ್ರಫುಲ್ಲತೆಯಿಂದ ಕೂಡಿರಲಿದೆ. ಇಂತಹ ಹವ್ಯಾಸ ಬೆಳೆಸಿಕೊಂಡಾಗ ಮಕ್ಕಳು ಒತ್ತಡದಿಂದ ನಿವಾರಣೆ ಪಡೆಯಬಹುದು’ ಎಂದರು. ಫ್ಯಾಬ್ರಿಕ್‌ ಕೊಲಾಜ್‌ ಕಲಾವಿದೆ ಅಪರ್ಣಾ ಮತ್ತಣ್ಣ ಅವರು, ‘ಹೆತ್ತವರು ಮಕ್ಕಳಲ್ಲಿ ಯಾವ ಪ್ರತಿಭೆ ಇದೆ ಎಂದು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದಾಗ ಅವರು ಸ್ಫೂರ್ತಿಯಿಂದ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಈ ಸ್ಪರ್ಧೆರ್ಯಲ್ಲಿ ಭಾಗವಹಿಸಿದ ಉಡುಪಿ ತಾಲೂಕಿನ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಐಚ್ಚಿಕ ವಿಷಯ ಆಯ್ದುಕೊಂಡು ಶಿವನ ಸುಂದರ ಚಿತ್ರಗಳನ್ನು ಬರೆದರು. ಇನ್ನು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ತಾಂಡವ ಶಿವ, ಶಾಂತ ಶಿವ, ರುದ್ರ ಶಿವ ಈ ಮೂರರಲ್ಲಿ ಒಂದು ವಿಷಯವನ್ನು ಆಯ್ದುಕೊಂಡು ಅತ್ಯದ್ಭುತ ಚಿತ್ರಗಳನ್ನು ರಚಿಸಿದರು. ಒಂದೊಂದು ವಿದ್ಯಾರ್ಥಿಯ ಕೈಯಿಂದ ಮೂಡಿದ ಚಿತ್ರಗಳು ಎಲ್ಲರ ಮನಸೂರೆಗೊಳಿಸಿತು. ಈ ಎರಡು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳು ಆಕರ್ಷಕ ನಗದನ್ನು ಪಡೆದರು ಮತ್ತು ಹತ್ತು ಉತ್ತಮ ಚಿತ್ರಗಳನ್ನು ಆಯ್ದು ಸಮಾಧಾನಕರ ಬಹುಮಾನಗಳು ನೀಡಿ ಪ್ರೋತ್ಸಾಹಿಸಲಾಯಿತು.

ಆರ್ಟಿಸ್ಟ್‌ ಫೋರಮ್‌ನ ಅಧ್ಯಕ್ಷ ರಮೇಶ್‌ ರಾವ್‌ ಮತ್ತು ತಂಡ ಅತ್ಯಂತ ಪಾರದರ್ಶಕವಾಗಿ ತೀರ್ಪು ನೀಡಿದರು.ಆರ್ಟಿಸ್ಟ್‌ ಫೋರಂನ ಡಾ| ಜನಾರ್ದನ ಹಾವಂಜೆ ಬಹುಮಾನ ವಿಜೇತರನ್ನು ಘೋಷಿಸಿದರು. ಅತಿಥಿಗಳು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಇದರೊಂದಿಗೆ ಅತಿಥಿ ಗಣ್ಯರಿಗೆ ಶಿವನ ಪ್ರೀತ್ಯರ್ಥ ಬಿಲ್ವಪತ್ರೆ ಗಿಡಗಳನ್ನು ನೀಡಿ ಗೌರವಿಸಲಾಯಿತು.

ಇನ್ನು ಸಾವಿತ್ರಿ ಶ್ರೀಧರ ಸಾಮಂತ್‌, ಶಿಲ್ಪಾ ರಘುಪತಿ ಭಟ್‌, ಆರ್ಟಿಸ್ಟ್‌ ಫೋರಮ್‌ನ ಕಾರ್ಯದರ್ಶಿ ಸಕು ಪಾಂಗಾಳ, ಮರಳು ಶಿಲ್ಪ ಕಲಾವಿದ ಶ್ರೀನಾಥ್‌ ಮಪಾಲ, ದೇಗುಲದ ಮೊಕ್ತೇಸರರಾದ ಸುಭಾಕರ ಸಾಮಂತ್‌, ದಿನೇಶ್‌ ಪ್ರಭು, ಕಾರ್ಯದರ್ಶಿ ಸುರೇಶ್‌ ಶ್ಯಾನುಭಾಗ್‌, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್‌ ಸಾಮಂತ್‌, ಕಾರ್ಯಕ್ರಮದ ಸಂಚಾಲಕರಾದ ಡಾ| ಆಶಾ ಪಾಟೀಲ್‌, ರಶ್ಮಿತಾ ಬಾಲಕೃಷ್ಣ, ಅತಿರುದ್ರ ಮಹಾಯಾಗ ಸಮಿತಿ ಕಾರ್ಯದರ್ಶಿಗಳಾದ ಪ್ರಕಾಶ್‌ ಕುಕ್ಕೆಹಳ್ಳಿ, ಬಾಲಕೃಷ್ಣ ಮದ್ದೋಡಿ, ರತ್ನಾಕರ ಇಂದ್ರಾಳಿ, ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಧನಂಜಯ ಅಮೀನ್‌ ಪೇತ್ರಿ, ಡಾ| ನಿತೇಶ್‌ ಶೆಟ್ಟಿ, ನಗರಸಭೆ ಸದಸ್ಯೆ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್‌ ಸಾಮಂತ್‌ ಅತಿರುದ್ರ ಮಹಾಯಾಗದ ಕುರಿತು ಮಾಹಿತಿ ನೀಡಿದರು. ದೇಗುಲ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್‌ ಠಾಕೂರ್‌ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಸುಚೇತಾ ನಾಯಕ್‌ ಮತ್ತು ಜ್ಯೋತಿ ಪಾಟೀಲ್ ಸ್ವಾಗತಿಸಿ, ನಿರೂಪಿಸಿದರು.

Related Posts

Leave a Reply

Your email address will not be published.