ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 5ನೇ ದಿನದ ಅತಿರುದ್ರ ಮಹಾಯಾಗದ ಮುನ್ನೋಟ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಲ್ಕು ದಿನಗಳನ್ನು ಪೂರೈಸಿದೆ.

ಅತಿರುದ್ರ ಮಹಾಯಾಗದ ಐದನೇ ದಿನವಾದ ಫೆಬ್ರವರಿ 26, 2023 ರ ಭಾನುವಾರದಂದು ಮುಂಜಾನೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಸಾಯಂಕಾಲ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಮುಂಜಾನೆ ಆಚಾರ್ಯಾದಿ ಋತ್ವಿಗ್ವರಣ, 10 ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀಸೂಕ್ತ ಹೋಮ ನೆರವೇರಲಿದೆ.
ಸಂಜೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ನಂತರ ಉಡುಪಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರಿಂದ ಧಾರ್ಮಿಕ ಉಪನ್ಯಾಸ, ಬೆಂಗಳೂರಿನ ಕಪರ್ಧಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಇವರಿಂದ ಭಾರತೀಯ ಶಾಸ್ತ್ರೀಯ ನೃತ್ಯ “ಮಹಾರುದ್ರ” ಮತ್ತು ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್ ಅವರ ನೃತ್ಯ ನಿರ್ದೇಶನದಲ್ಲಿ, ಡಾ. ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ, ಶ್ರೀಮತಿ ಸುಧಾ ಆಡುಕಳ ಅವರ ರಚನೆಯಲ್ಲಿ ನೃತ್ಯ ರೂಪಕ – ನಾರಸಿಂಹ ನೆರವೇರಲಿದೆ.

ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಮಾರ್ಚ್ 05, 2023 ರವರೆಗೆ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ನಿರಂತರವಾಗಿ ಯಾಗ ನಡೆಯಲಿವೆ.