ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ಪತ್ರಿಕಾಗೋಷ್ಠಿ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗ ನಿಟ್ಟಿನಲ್ಲಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ವತಿಯಿಂದ ಫೆಬ್ರವರಿ 21, 2023 ರ ಮಂಗಳವಾರದಂದು ಪತ್ರಿಕಾಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ, ಶಾಸಕ ಕೆ. ರಘುಪತಿ ಭಟ್ ಅವರು, 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸಲಿರುವ 180 ಋತ್ವಿಜರ ವಾಸ್ತವ್ಯಕ್ಕಾಗಿ “ಈಶಾವಾಸ್ಯಾಂ” ವಸತಿ ಗೃಹ ರಚನೆಯಾಗಿದೆ. ಈ ಯಾಗದಲ್ಲಿ ಪಾಲ್ಗೊಳ್ಳುವ 35,000 ದಿಂದ 1 ಲಕ್ಷದವರೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ ಬೇಕಾಗುವ ಭೋಜನಾ ವ್ಯವಸ್ಥೆಗೆ “ಸೀತಾರಸೋಯಿ” ಪಾಕಶಾಲೆ, ಅನ್ನಪೂರ್ಣ ಭೋಜನ ಶಾಲೆ, ಉಗ್ರಾಣ ಸಜ್ಜಾಗಿದೆ. ಅತಿರುದ್ರ ಮಹಾಯಾಗಕ್ಕೆ ರಾಜಕಾರಣ ಗಣ್ಯರಾದ ಸಾರಿಗೆ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್. ಅಶೋಕ್, ತೇಜಸ್ವಿ ಸೂರ್ಯ, ಅಣ್ಣಾಮಲೈ ಮತ್ತು ಹೊರನಾಡು ಧರ್ಮದರ್ಶಿಗಳಾದ ಭೀಮೇಶ್ವರ ಜ್ಯೋಷಿ ಆಗಮಿಸಲಿರುವ ಸೂಚನೆ ನೀಡಿದರು. ಈ ಮಹಾಯಾಗದ ತಯಾರಿಗಾಗಿ ಸುಮಾರು 7-8 ಎಕರೆ ಜಾಗದ ವ್ಯವಸ್ಥೆಯನ್ನು ಮಾಡಿಕೊಟ್ಟ ಮಾಹೆ ಗೆ ಧನ್ಯವಾದವನ್ನು ಸಲ್ಲಿಸಿದರು. ಅತಿರುದ್ರ ಮಹಾಯಾಗದ 12 ದಿನಗಳ ಕಾಲ ನಡೆಯಲಿರುವ ಕೆಲವು ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಇನ್ನು ವಾರಣಾಸಿಯಲ್ಲಿ ನಡೆಯುವ ಗಂಗಾರತಿಯ ಮಾದರಿಯಲ್ಲಿ, ಶಿವಪಾಡಿಯ ಅತಿರುದ್ರ ಮಹಾಯಾಗದ ಸಂದರ್ಭದಲ್ಲಿ ಶಿವಾರತಿ ನಡೆಯಲಿದೆ. ಉಡುಪಿಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆಯಲಿರುವ ರುದ್ರ ಯಾಗದಲ್ಲೇ ಅತೀ ದೊಡ್ಡ ಯಾಗವಾದ ಅತಿರುದ್ರ ಮಹಾಯಾಗಕ್ಕೆ ಉಡುಪಿಯ ಜನರು ಆಗಮಿಸಿ, ಹೊರೆಕಾಣಿಕೆಯನ್ನು ನೀಡಬೇಕಾಗಿ ಕೇಳಿಕೊಂಡರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಅವರು ಮಾತನಾಡಿ, ಅತಿರುದ್ರ ಮಹಾಯಾಗಕ್ಕೆ ಮಾಡಿದಂತಹ ಸಕಲ ತಯಾರಿ ಹಾಗೂ ಆಗಮಿಸಲಿರುವ ಭಕ್ತರಿಗಾಗಿ ಕಲ್ಪಿಸಲಾಗುವ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡಿ ಸರ್ವ ಭಕ್ತಾದಿಗಳು ಯಾಗದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಅತಿರುದ್ರ ಮಹಾಯಾಗದ ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿಯಾದ ಸತೀಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಎಸ್. ಮದ್ದೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕಾರ್ಯಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಆಡಳಿತ ಮೊಕ್ತೇಸರಾದ ದಿನೇಶ್ ಪ್ರಭು ಮತ್ತು ಟ್ರಸ್ಟಿ ಸಂಜಯ ಪ್ರಭು ಉಪಸ್ಥಿತರಿದ್ದರು.