ಶಿವಪಾಡಿಯ ಅತಿರುದ್ರ ಮಹಾಯಾಗದಲ್ಲಿ ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ
ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಆರನೇ ದಿನ ಫೆಬ್ರವರಿ 27, 2023 ರ ಸೋಮವಾರದಂದು, ಮುಂಜಾನೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಮಹಾಮೃತ್ಯುಂಜಯ ಹೋಮ ನೆರವೇರಿತು.
ಇಂದು ನಡೆಯುತ್ತಿರುವ ಅತಿರುದ್ರ ಮಹಾಯಾಗದ ವಿಶೇಷ ಎಂಬಂತೆ, ಬೆಳಗ್ಗೆ ಸಚಿವ ವಿ. ಸುನೀಲ್ ಕುಮಾರ್ ಆಗಮಿಸಿದ್ದು, ಮಧ್ಯಾಹ್ನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಶಿವಪಾಡಿಯ ಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡು, ಯಾಗಕ್ಕೆ ಬೇಕಾಗುವ ದ್ರವ್ಯಗಳನ್ನು ಅರ್ಪಿಸಿದರು. ಶ್ರೀ ಉಮಾಮಹೇಶ್ವರ ದೇವರಿಗೆ ಪೂಜೆಯನ್ನು ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಿದರು. ನಂತರ ಶಿವಪಾಡಿಯ ಅತಿರುದ್ರ ಮಹಾಯಾಗದ ಆಕರ್ಷಣೆಯಾಗಿರುವ ಪುಂಗನೂರು ತಳಿಯ ಗೋವುಗಳನ್ನು ವೀಕ್ಷಿಸಿ ಸಮಯವನ್ನು ಕಳೆದರು.
ಸಂಜೆ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಲಿದ್ದು, ಬಳಿಕ ಅತಿರುದ್ರ ಮಹಾಯಾಗದ ಆರನೇ ದಿನದ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.