ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಸಾಗುತ್ತಿರುವ 7ನೇ ದಿನದ ಅತಿರುದ್ರ ಮಹಾಯಾಗ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಏಳನೇ ದಿನ ಫೆಬ್ರವರಿ 28, 2023 ರ ಮಂಗಳವಾರದಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಭಾಗ್ಯಸೂಕ್ತ ಹೋಮ ನೆರವೇರಿತು. ಮುಂಜಾನೆ ಸಮಯದಲ್ಲಿ ತುಮಕೂರು ಜಿಲ್ಲೆಯ ತಿಮ್ಮಲಾಪುರದಿಂದ ಉಡುಪಿಗೆ ಆಗಮಿಸಿದ 100 ವರ್ಷದ ಶಿವಮ್ಮ ಮತ್ತು ಅವರ ಮಗ ಶಿವರುದ್ರಯ್ಯ, ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಮಧ್ಯಾಹ್ನ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಭಿಮಾನಿಗಳು ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು. ಇದರೊಂದಿಗೆ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆ ಜರುಗಿತ್ತು.


ಸಾಯಂಕಾಲ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿವೆ. ನಂತರ ಸಂಜೆ 6 ರಿಂದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮೋಹನ್ ಆಳ್ವ ಅವರಿಂದ ಪ್ರಧಾನ ಭಾಷಣ, ಸಂಜೆ 7 ರಿಂದ ವಿದುಷಿ ರೂಪಾ ಕಿರಣ್, ಹಾಂಕಾಂಗ್ ಅವರಿಂದ ಭರತನಾಟ್ಯ, ರಾತ್ರಿ 8 ರಿಂದ ಮಂಗಳೂರಿನ ಸಾಯಿ ಶಕ್ತಿ ಕಲಾ ತಂಡದ ಪ್ರಸ್ತುತಿಯಲ್ಲಿ “ಬೊಳ್ಳಿ ಮಲೆತ ಶಿವ ಶಕ್ತಿಲು” ತುಳು ಪೌರಾಣಿಕ ನಾಟಕ ಜರುಗಲಿದೆ.