ಶಿವಪಾಡಿಯ ದಿವ್ಯ ಸಂಜೆ : 9ನೇ ದಿನ ಅತಿರುದ್ರ ಮಹಾಯಾಗದ ಕಾರ್ಯಕ್ರಮಗಳ ಜೊತೆಯಾಯ್ತು ಶಿವಾರತಿ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 2, 2023 ರ ಗುರುವಾರದಂದು ನಡೆದ ಅತಿರುದ್ರ ಮಹಾಯಾಗದ ಒಂಬತ್ತನೇ ದಿನದಂದು ಸಕಲ ಧಾರ್ಮಿಕ ಕಾರ್ಯಗಳ ನಂತರ ನಗರಸಭೆಯ 35 ವಾರ್ಡ್, ತಾಲೂಕಿನ 19 ಗ್ರಾಮ ಪಂಚಾಯತ್, ಏಳೆಂಟು ದೇವಸ್ಥಾನಗಳಿಂದ 100ಕ್ಕೂ ಅಧಿಕ ವಾಹನಗಳಲ್ಲಿ ಹಸುರು ಹೊರೆಕಾಣಿಕೆಯ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಆದಿಯೋಗಿ ಶಿವನ ವಿಗ್ರಹ ಸಹಿತ ಚೆಂಡೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ತೆಂಗಿನಕಾಯಿ, ಎಣ್ಣೆ, ಬೆಲ್ಲ, ಹಲಸು, ಸಿಯಾಳ, ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ಅಕ್ಕಿ ಮತ್ತು ಹಲವು ಬಗೆಯ ವಸ್ತುಗಳು ಹೊರೆಕಾಣಿಕೆಯಲ್ಲಿದ್ದವು. ಹಸುರು ಹೊರೆಕಾಣಿಕೆಯು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಸಮರ್ಪಣೆಗೊಂಡಿತು. ಸಿಂಡಿಕೇಟ್ ಸರ್ಕಲ್ ಬಳಿ ಶಾಸಕ ಕೆ. ರಘುಪತಿ ಭಟ್ ಅವರು ಮೆರವಣಿಗೆಗೆ ಚಾಲನೆ ನೀಡಿದರು. ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಮಹೇಶ್ ಠಾಕೂರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭೆ ಸದಸ್ಯರು ಮತ್ತು ಗಣ್ಯರು ಉಪಸ್ಥಿತರಿದ್ದರು.



ಬಳಿಕ ಸಂಜೆ 7 ಗಂಟೆಗೆ, ಎಲ್ಲರೂ ಕಾದು ಕುಳಿತಿದ್ದಂತಹ, ‘ಶಿವಾರತಿ’ ಅತ್ಯದ್ಭುತವಾಗಿ ವಾರಣಾಸಿಯ ವಿಶ್ವನಾಥ ದೇವಸ್ಥಾನದ ‘ಕಾಶಿ ಮಹಾರತಿ’ ತಂಡದಿಂದ, ಗಂಗಾರತಿ ಮಾದರಿಯಲ್ಲಿ ನೆರವೇರಿತು.


ಶಿವಾರತಿಯ ನಂತರ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಡೈನಾಮಿಕ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕರಾದ ನಾಸಿಕ್ ನ ಸಿವಿಲ್ ಇಂಜಿನಿಯರ್ ಗೋಪಾಲ್ ಚಕ್ನಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಕೃಷ್ಣಪ್ರಸಾದ್, ಉಡುಪಿಯಲ್ಲಿ ನೆಲೆಸಿದ್ದೇ ನಮ್ಮ ಪುಣ್ಯ. ಇಂದು ಶಿವಪಾಡಿಯಲ್ಲಿ ನಡೆದ ಶಿವಾರತಿ, ಕಾಶಿಯಲ್ಲಿ ನಡೆಯುವ ಶಿವಾರತಿಗಿಂತಲೂ ಅದ್ಭುತವಾಗಿತ್ತು. ಇಂತಹ ಅತಿರುದ್ರ ಮಹಾಯಾಗವನ್ನು ಎಲ್ಲರೂ ಕಾಣುವ ಭಾಗ್ಯ ಕಲ್ಪಿಸಿಕೊಟ್ಟ ಮಹೇಶ್ ಠಾಕೂರ್ ಗೆ ವಂದಿಸಿ, ಎಲ್ಲರಿಗೂ ಸಹಾಯ ಮಾಡುವ ಅವರ ಸದ್ಗುಣವನ್ನು ಹೊಗಳಿದರು.


ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಹೆಸರಾಂತ ಸಂಗೀತ ಕಲಾವಿದೆ ಸಂಗೀತ ಕಟ್ಟಿ ಕುಲಕರ್ಣಿ, ಹೋಮ ಕುಂಡದ ಸೇವಾಕರ್ತೃ ಕಾರ್ತಿಕ್ ನಾಯಕ್, ವಾರಣಾಸಿಯ ವಿಶ್ವನಾಥ ದೇವಸ್ಥಾನದ ‘ಕಾಶಿ ಮಹಾರತಿ’ ತಂಡದ ಮುಖ್ಯಸ್ಥರಾದ ಪಂಡಿತ್ ಮೋಹಿತ್ ಉಪಾಧ್ಯಾಯ, ಉಡುಪಿ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಶ ಕೊಡವೂರು, ಜೋಗಿ ಸಮಾಜದ ಅಧ್ಯಕ್ಷರಾದ ಪಿ. ಸುರೇಶ್ ಕುಮಾರ್ ಮುದ್ರಾಡಿ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ಉಡುಪಿ ನಗರಸಭಾ ಸದಸ್ಯರು, ದೇವಸ್ಥಾನದ ಟ್ರಸ್ಟಿಗಳು ಮತ್ತು ಯಾಗ ಸಮಿತಿಯ ಟ್ರಸ್ಟಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಂಗೀತ ಶಾರದೆ ಶ್ರೀಮತಿ ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.