ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 10ನೇ ದಿನ ಅತಿರುದ್ರ ಮಹಾಯಾಗದ ಮುನ್ನೋಟ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಒಂಬತ್ತು ದಿನಗಳನ್ನು ಪೂರೈಸಿದೆ. ಈಗಾಗಲೇ ಹಲವು ಗಣ್ಯಾತಿ ಗಣ್ಯರು ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ್ದಾರೆ ಮತ್ತು ಯಾಗದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅತಿರುದ್ರ ಮಹಾಯಾಗದಲ್ಲಿ ಭಾಗಿಯಾಗಲೆಂದೇ ದೂರದೂರಿನಿಂದ ಭಕ್ತಾದಿಗಳು ಆಗಮಿಸುತ್ತಿರುವುದು, ಯಾಗದ ಕಳೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದರೊಂದಿಗೆ ಭಕ್ತಿಯ ಸ್ವರೂಪವಾಗಿ ನಾನಾ ರೀತಿಯ ಸೇವೆಗಳನ್ನು ಭಕ್ತರು ಶ್ರೀ ರುದ್ರನಿಗೆ ನೀಡುತ್ತಿರುವುದು ವಿಶೇಷವಾಗಿದೆ. ಪರಶಿವನಿಗೆ ಭಕ್ತಿ ಮತ್ತು ಪ್ರೀತಿಯಿಂದ ಏನನ್ನೂ ನೀಡಬಹುದು ಎಂಬುದಕ್ಕೆ ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಸಾಕ್ಷಿಯಾಗಿದೆ.

ಅತಿರುದ್ರ ಮಹಾಯಾಗದ ಹತ್ತನೇ ದಿನವಾದ ಮಾರ್ಚ್ 03, 2023 ರ ಶುಕ್ರವಾರದಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 07:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ನೆರವೇರಲಿದೆ. ಸಾಯಂಕಾಲ 6 ರಿಂದ ಅತಿರುದ್ರ ಯಾಗಮಂಟಪದಲ್ಲಿ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಸಾಮೂಹಿಕ “ನಮಃ ಶಿವಾಯ” ಮಹಾಮಂತ್ರದ ಪುರಶ್ಚರಣ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಲಿವೆ.

ಇದರೊಂದಿಗೆ ಸಂಜೆ 5 ರಿಂದ ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾದ ಶ್ರೀ ಅಜಿತ್ ಹನುಮಕ್ಕನವರಿಂದ ದಿಕ್ಸೂಚಿ ಭಾಷಣ ಮತ್ತು ಸಂಜೆ 7:30 ರಿಂದ, ಪ್ರಸಿದ್ಧ ಶಾಸ್ತ್ರೀಯ ಗಾಯಕರಾದ ಶ್ರೀ ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ವಿಶೇಷ ಹಾಗೂ ಬಲು ಅಪರೂಪವೆಂಬಂತೆ ಸಂಜೆ 7 ಗಂಟೆಯಿಂದ, ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ವಾರಣಾಸಿಯ ಪಂಡಿತರಿಂದ “ಶಿವಾರತಿ” ನಡೆಯಲಿದೆ. ಈ ವಿಶೇಷ ಆರಾಧನೆ ಮಾರ್ಚ್ ೦2 ರಂದು ಪ್ರಾರಂಭವಾಗಿದ್ದು, ಮಾರ್ಚ್ 4 ರವರೆಗೆ ಸಂಜೆ 7 ಗಂಟೆಗೆ ನಡೆಯಲಿದೆ. ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಮಾರ್ಚ್ 05, 2023 ರವರೆಗೆ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ನಿರಂತರವಾಗಿ ಯಾಗ ನಡೆಯಲಿವೆ.

Related Posts

Leave a Reply

Your email address will not be published.