ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 11ನೇ ದಿನ ಅತಿರುದ್ರ ಮಹಾಯಾಗದ ಸಭಾ ಕಾರ್ಯಕ್ರಮ
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 04, 2023 ರ ಶನಿವಾರದಂದು ನಡೆದ ಹನ್ನೊಂದನೇ ದಿನದ ಅತಿರುದ್ರ ಮಹಾಯಾಗದಲ್ಲಿ ಸಂಜೆ ಶ್ರೀ ಕ್ಷೇತ್ರ ಶಿವಪಾಡಿಗೆ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಬೃಹತ್ ಶೋಭಾಯಾತ್ರೆ ನಡೆಯಿತು. ವಾದ್ಯ, ಚೆಂಡೆಗಳ ಘೋಷದೊಂದಿಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದವರೆಗೆ ಶೃಂಗೇರಿ ಸ್ವಾಮೀಗಳ ಭವ್ಯ ಮೆರವಣಿಗೆ ಮಾಡಲಾಯಿತು. ನಂತರ ಸಭಾಮಂಟಪದಲ್ಲಿ ಧೂಳಿಪಾದ ಪೂಜೆ ನೆರವೇರಿತು.
ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಅಂತರಾಷ್ಟ್ರೀಯ ನಗರ ಮಣಿಪಾಲದಲ್ಲಿ ಜಗದ್ಗುರುಗಳ ಶೋಭಯಾತ್ರೆ ಒಂದೊಳ್ಳೆ ಸಂದೇಶವಾಗಿದೆ. ಉಡುಪಿ ಪರ್ಯಾಯ ಪೀಠದ ಮೆರವಣಿಗೆಯಂತೆ ಭವ್ಯವಾಗಿ ನೆರವೇರಿತು. ಶೃಂಗೇರಿ ಪೀಠದ ಅನುಗ್ರಹವಿಲ್ಲದಿದ್ದರೆ, ಅತಿರುದ್ರ ಮಹಾಯಾಗವನ್ನು ಧಾರ್ಮಿಕವಾಗಿ ಸರಿಯಾಗಿ ಮಾಡಲಾಗುತ್ತಿಲ್ಲ. ಇನ್ನು ಮುಂದೆ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಅತಿರುದ್ರ ಮಹಾಯಾಗ ನಡೆಯುವಂತೆ ಶೃಂಗೇರಿ ಮಹಾಸ್ವಾಮಿಗಳಲ್ಲಿ ಅನುಗ್ರಹಿಸುವಂತೆ ಕೇಳಿಕೊಂಡರು.
ನಂತರ ಶೃಂಗೇರಿ ಶ್ರೀ ಶಾರದಾ ಪೀಠದ ಉಡುಪಿ ಧರ್ಮಾಧಿಕಾರಿ ಹಾಗೂ ಅತಿರುದ್ರ ಮಹಾಯಾಗವನ್ನು ಯೋಜಿಸುತ್ತಿರುವ ವೇದಮೂರ್ತಿ ವಾಗೇಶ ಶಾಸ್ತ್ರಿ ಅವರು ಭಿನ್ನವತ್ತಳೆ ವಾಚಿಸಿದರು. ಬಳಿಕ ಕೆ. ರಘುಪತಿ ಭಟ್, ವೇದಮೂರ್ತಿ ವಾಗೇಶ ಶಾಸ್ತ್ರಿಮತ್ತು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಸೇರಿಕೊಂಡು ಭಿನ್ನವತ್ತಳೆಯನ್ನು ಶೃಂಗೇರಿ ಪೀಠದ ಮಹಾಸ್ವಾಮಿಗಳಿಗೆ ಅರ್ಪಿಸದರು.
ನಂತರ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಅನುಗ್ರಹ ಭಾಷಣ ನೀಡಿದರು. ಆಶೀರ್ವಚನದ ಬಳಿಕ ಪ್ರಸಿದ್ಧ ಟಿವಿ ರಿಯಾಲಿಟಿ ಶೋ ‘ಜೀ ಸರಿಗಮಪ’ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ಜರುಗಿತು.