“ಲೋಕದ ಉದ್ಧಾರಕ್ಕಾಗಿ ಬಂದಿರುವಂತಹ ಧರ್ಮ ನಮ್ಮದು” : ಶೃಂಗೇರಿ ಶಾರದಾ ಪೀಠದ ಸ್ವಾಮೀಗಳ ಸಂದೇಶ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 04, 2023 ರ ಶನಿವಾರದಂದು ನಡೆದ ಹನ್ನೊಂದನೇ ದಿನದ ಅತಿರುದ್ರ ಮಹಾಯಾಗದಲ್ಲಿ ಸಂಜೆ ಶ್ರೀ ಕ್ಷೇತ್ರ ಶಿವಪಾಡಿಗೆ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಬೃಹತ್ ಶೋಭಾಯಾತ್ರೆ ನಡೆಯಿತು. ವಾದ್ಯ, ಚೆಂಡೆಗಳ ಘೋಷದೊಂದಿಗೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದವರೆಗೆ ಶೃಂಗೇರಿ ಸ್ವಾಮೀಗಳ ಭವ್ಯ ಮೆರವಣಿಗೆ ಮಾಡಲಾಯಿತು. ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಶಿವಪಾಡಿಗೆ ಆಗಮಿಸಿದ ನಂತರ ಸಭಾಮಂಟಪದಲ್ಲಿ ಧೂಳಿಪಾದ ಪೂಜೆ ನೆರವೇರಿತು.


ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಅಂತರಾಷ್ಟ್ರೀಯ ನಗರ ಮಣಿಪಾಲದಲ್ಲಿ ಜಗದ್ಗುರುಗಳ ಶೋಭಯಾತ್ರೆ ಒಂದೊಳ್ಳೆ ಸಂದೇಶವಾಗಿದೆ. ಉಡುಪಿ ಪರ್ಯಾಯ ಪೀಠದ ಮೆರವಣಿಗೆಯಂತೆ ಭವ್ಯವಾಗಿ ನೆರವೇರಿತು. ಶೃಂಗೇರಿ ಪೀಠದ ಅನುಗ್ರಹವಿಲ್ಲದಿದ್ದರೆ, ಅತಿರುದ್ರ ಮಹಾಯಾಗವನ್ನು ಧಾರ್ಮಿಕವಾಗಿ ಸರಿಯಾಗಿ ಮಾಡಲಾಗುತ್ತಿಲ್ಲ. ಇನ್ನು ಮುಂದೆ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಅತಿರುದ್ರ ಮಹಾಯಾಗ ನಡೆಯುವಂತೆ ಶೃಂಗೇರಿ ಮಹಾಸ್ವಾಮಿಗಳಲ್ಲಿ ಅನುಗ್ರಹಿಸುವಂತೆ ಕೇಳಿಕೊಂಡರು.
ನಂತರ ಶೃಂಗೇರಿ ಶ್ರೀ ಶಾರದಾ ಪೀಠದ ಉಡುಪಿ ಧರ್ಮಾಧಿಕಾರಿ ಹಾಗೂ ಅತಿರುದ್ರ ಮಹಾಯಾಗವನ್ನು ಯೋಜಿಸುತ್ತಿರುವ ವೇದಮೂರ್ತಿ ವಾಗೇಶ ಶಾಸ್ತ್ರಿ ಅವರು ಭಿನ್ನವತ್ತಳೆ ವಾಚಿಸಿದರು. ಬಳಿಕ ಕೆ. ರಘುಪತಿ ಭಟ್, ವೇದಮೂರ್ತಿ ವಾಗೇಶ ಶಾಸ್ತ್ರಿಮತ್ತು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಸೇರಿಕೊಂಡು ಭಿನ್ನವತ್ತಳೆಯನ್ನು ಶೃಂಗೇರಿ ಪೀಠದ ಮಹಾಸ್ವಾಮಿಗಳಿಗೆ ಅರ್ಪಿಸದರು.

ನಂತರ ಅನುಗ್ರಹ ಭಾಷಣದಲ್ಲಿ ಮಾತನಾಡಿದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು, ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಬರೆದಿಡಬೇಕಾದ ಸಂದರ್ಭವಿದು. ಅಂತಹದೊಂದು ಭಗವದ್ ಕಾರ್ಯ ಈ ಪ್ರದೇಶದಲ್ಲಿ ನಡೆದಿದೆ. ಎಲ್ಲರೂ ಬಂದು ದರ್ಶನ ಮಾಡುವಂತಹ ಸಕಲ ತಯಾರಿಗಳು ಏರ್ಪಡಿಸಿರುವುದು ಸಂತೋಷದ ವಿಷಯ. ನಮ್ಮ ಸನಾತನ ಧರ್ಮ ಅತ್ಯಂತ ಶ್ರೇಷ್ಠವಾದ ಧರ್ಮ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕೆಲವರು ಇಷ್ಟಬಂದಂತೆ ಮಾತನಾಡುತ್ತಾರೆ. ಒಂದು ವಿಷಯವನ್ನು ವಿಮರ್ಶೆ ಮಾಡುವಂತಹ ಬುದ್ಧಿಶಕ್ತಿ ಎಲ್ಲಾ ಕಡೆ ಒಂದೇ ರೀತಿಯಲ್ಲಿ ಕೆಲಸ ಮಾಡಬೇಕು. ಆದರೆ ಬುದ್ಧಿಶಕ್ತಿಗೂ ಪಕ್ಷಪಾತವಿದೆ. ಒಂದು ವಿಷಯದ ಬಗ್ಗೆ ವಿಮರ್ಶೆ ಮಾಡಿ ಯಾವುದು ತಪ್ಪು – ಸರಿ ಎಂದು ತಿಳಿದುಕೊಳ್ಳುವುದು ಮನುಷ್ಯನ ಕರ್ತವ್ಯ. ಅದಕ್ಕಾಗಿಯೇ ಭಗವಂತ ಮನುಷ್ಯನಿಗೆ ಬುದ್ಧಿಶಕ್ತಿಯನ್ನು ಕೊಟ್ಟಿರುವುದು. ಯಾರೊಬ್ಬರ ಮಾತನ್ನು ಕೇಳದೆ ನಾವೇ ಸರಿಯಾಗಿ ವಿಮರ್ಶೆಯನ್ನು ಮಾಡಬೇಕು. ವಿಮರ್ಶೆ ಮಾಡುವಾಗಲೂ ಪಕ್ಷಪಾತ ಬುದ್ಧಿಯನ್ನು ತೋರಿಸುವವರ ಮಾತಿಗೆ ಬೆಲೆಯನ್ನು ಕೊಡಬಾರದು. ಯಾಕೆಂದರೆ ನಮ್ಮ ಧರ್ಮದ ವಿಷಯವಾಗಿ ಯಾರೂ ವಿಮರ್ಶೆ ಮಾಡಬೇಕಿಲ್ಲ. ಎಲ್ಲವನ್ನೂ ನಮ್ಮ ಹಿರಿಯರು ಮಾಡಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ಸಾಗಿ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಲೋಕದ ಉದ್ಧಾರಕ್ಕಾಗಿ ಬಂದಿರುವಂತಹ ಧರ್ಮ ನಮ್ಮದು. ನಮ್ಮ ಧರ್ಮ ಶ್ರೇಷ್ಠವಾಗಿರುವುದರಿಂದ ಹಾಗೂ ದೃಢವಾದ ಪರಂಪರೆ ಇರುವುದರಿಂದಲೇ, ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿದೆ. ಸಾಕ್ಷಾತ್ ಭಗವಂತನೆ ಅವತಾರಾವೆತ್ತಿ ಈ ಧರ್ಮದ ಉದ್ಧಾರ ಮಾಡಿದ್ದಾನೆ. ಮಹಾನ್ ಪುರುಷರು ಹಾಗೂ ಅನೇಕ ಜನರ ರೂಪದಲ್ಲಿ ಈ ಧರ್ಮದ ಪ್ರಚಾರವಾಗಿದೆ ಎಂದು ಸನಾತನ ಧರ್ಮದ ಮಹತ್ವವನ್ನು ಸಾರಿದರು.
ಆಶೀರ್ವಚನದ ಬಳಿಕ ಪ್ರಸಿದ್ಧ ಟಿವಿ ರಿಯಾಲಿಟಿ ಶೋ ‘ಜೀ ಸರಿಗಮಪ’ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ಜರುಗಿತು.