ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಕರೆ ಉತ್ಸವ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.20 ರಂದು ದೇವಳದ ತಂತ್ರಿ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವೇ ಮೂ ಶ್ರೀಧರ್ ತಂತ್ರಿಯವರ ನೇತೃತ್ವದಲ್ಲಿ ಪೂಕರೆ ಉತ್ಸವ ವಿಜೃಂಭಣೆಯಿಂದ ನಡೆದಿದೆ. ನಂದಿ ಮುಖವಾಡ ಧರಿಸಿದ `ಎರುಕೊಳ’ ದೈವದೊಂದಿಗೆ ದೇವರ ಉತ್ಸವ ಬರುವುದೇ ವಿಶೇಷ.
ಸಂಜೆ ದೇವರು ಉತ್ಸವ ಸವಾರಿಗೆ ದೇವಳದ ಪಶ್ಚಿಮ ದ್ವಾರದಿಂದ ಹೊರಟು ಪೇಟೆ ಸವಾರಿಯಲ್ಲಿ ನಂದಿಯ ಮುಖವಾಡ ಧರಿಸಿದ ಎರುಕೊಳ ದೈವದ ಜೊತೆಗೆ ನೆಲ್ಲಿಕಟ್ಟೆಯಲ್ಲಿರುವ ಪೂಕರೆ ಕಟ್ಟೆಗೆ ಆಗಮಿಸುವ ಸಂಪ್ರದಾಯ. ಅಲ್ಲಿಯ ತನಕ ಎರುಕೊಳ ದೈವ ಜೊತೆಯಲ್ಲಿರುತ್ತದೆ. ಶ್ರೀ ದೇವರ ಉತ್ಸವ ಪೂಕರೆ ಕಟ್ಟೆಯಿಂದ ದೇವಳದ ಗದ್ದೆಯನ್ನು ನೋಡಿದ ಬಳಿಕ ಕಟ್ಟೆಯಲ್ಲಿ ವಿರಾಜಮಾನರಾದರು. ವೇ ಮೂ ಶ್ರೀಧರ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು.

ತಂತ್ರಿಯವರು ಪೂಕರೆ ಗದ್ದೆಗೆ ಪ್ರಾರ್ಥನೆ ಮಾಡಿದರು. ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಅವರು ನಾಗ ತಂಬಿಲ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಪೂಕರೆ ಇಟ್ಟು ಪ್ರಾರ್ಥನೆ ಮಾಡಿದರು. ಬಳಿಕ ಪೂಕರೆ ಕಟ್ಟೆಯಲ್ಲಿ ಶ್ರೀದೇವರಿಗೆ ದೀವಟಿಕೆ ಪ್ರಣಾಮ್, ಕಟ್ಟೆಪೂಜೆ ನಡೆದು, ಭಕ್ತರಿಗೆ ಸೀಯಾಳ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ರಾಮ್‍ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಪೂಕರೆ ಕಟ್ಟೆಯ ಸೇವೆ ಮಾಡುತ್ತಿರುವ ಕೆ.ವಿ.ಪೈ ಮತ್ತು ಬಾಲಕೃಷ್ಣ ಪೈ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.