ಸುಳ್ಯ: ಕೆಎಸ್‌ಆರ್‌ಟಿಸಿ ಕಾಂಟ್ರೆಕ್ಟ್ ಸಿಬ್ಬಂದಿಗೆ ವೇತನ ಪಾವತಿಸದ ಸಂಸ್ಥೆ- ಬಸ್ ಚಾಲಕರ ಪ್ರತಿಭಟನೆ
ಕೆಎಸ್‌ಆರ್‌ಟಿಸಿ ಕಾಂಟ್ರೆಕ್ಟ್ ಸಿಬ್ಬಂದಿಗೆ ವೇತನ ನೀಡದ ಸತಾಯಿಸುತ್ತಿರುವ ಖಾಸಗಿ ಸಂಸ್ಥೆಗಳ ವಿರುದ್ಧ ಪುತ್ತೂರು, ಸುಳ್ಯ, ಮಡಿಕೇರಿ ಡಿಪೋಗಳ ಬಸ್ ಚಾಲಕರು ಬಸ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಬಸ್ ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್‌ಗೆ ಕಾಂಟ್ರಾಕ್ಟ್ ಬೇಸ್‌ನಲ್ಲಿ ಚಾಲಕರನ್ನು ನೇಮಕ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಈ ಬಸ್‌ಗಳು ಹೆಚ್ಚು ಸಂಚಾರ ನಡೆಸುತ್ತವೆ. ಇದೀಗ ಆ ಬಸ್ ನಲ್ಲಿ ಚಾಲಕರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಕೊಡಗಿನ ಮಡಿಕೇರಿಯ ಬಸ್ ಸಿಬ್ಬಂದಿ ಬಸ್ ನಿಲ್ಲಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಸಿಬ್ಬಂದಿ ನೇಮಕದ ಕಾಂಟ್ರಾಕ್ಟ್ ಡೀಲ್ ಹೊಂದಿದ್ದ ಪನ್ನಗ ಎಂಬ ಸಂಸ್ಥೆ ಉದ್ಯೋಗಿಗಳಿಗೆ 23 ಸಾವಿರ ರೂ. ವೇತನ ನೀಡುತ್ತಿತ್ತು. ಆದರೆ ಇದೀಗ ಹೊಸದಾಗಿ ಕಾಂಟ್ರಾಕ್ಟ್ ಡೀಲ್ ಹೊಂದಿರುವ ಪೂಜಾಯ ಅನ್ನುವ ಸಂಸ್ಥೆ ಸಿಬ್ಬಂದಿಗೆ 16 ಸಾವಿರ ರೂ. ವೇತನ ನೀಡಿದೆ. ಕೆಲವರಿಗೆ ಇನ್ನೂ ವೇತನವೇ ನೀಡಿಲ್ಲ ಎಂಬ ಬಗ್ಗೆ ದೂರು ಕೇಳಿ ಬಂದಿದೆ.
ಅಲ್ಲದೆ ಮೂರು ತಿಂಗಳಿನಿಂದ ಪಿಎಫ್ ಹಣವನ್ನು ಕೂಡ ಕಡಿತ ಮಾಡಿ ಪಿಎಫ್‌ಗೆ ಹಾಕಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಯ-ಕೊಯನಾಡು, ಸುಳ್ಯ ಪುತ್ತೂರು ಹಾಗೂ ಮಡಿಕೇರಿ ಭಾಗದ ಬಸ್‌ಗಳ ಪ್ರಯಾಣದಲ್ಲಿ ವ್ಯತ್ಯಯ ಕಂಡು ಬಂದಿದೆ.
ಹಠಾತ್ ಸಿಬ್ಬಂದಿ, ನಿರ್ಧಾರದಿಂದ ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಉನ್ನತಾಧಿಕಾರಿಗಳು ಮತ್ತು ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಸದ್ಯ ಬೇಡಿಕೆ ಈಡೇರುವವರೆಗೆ ಚಾಲಕರು ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.