ಅ.2 ರಿಂದ 10 ರವರೆಗೆ ಸುಳ್ಯ ದಸರಾ ಸಂಭ್ರಮ

ಸುಳ್ಯ: ಸುಳ್ಯದ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ಸುಳ್ಯ ತಾಲೂಕು ದಸರ ಉತ್ಸವ ಸಮಿತಿಯ ಆಶ್ರಯದಲ್ಲಿ 51ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ ಅ. 2ರಿಂದ ಅ. 10ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ವಿಜೃಂಭಣೆಯ ಶಾರದಾಂಬೋತ್ಸವಕ್ಕೆ ಎಲ್ಲಾ ಸಿದ್ಧತೆಯನ್ನು ನಡೆಸಲಾಗಿದೆ. ದಸರಾಕ್ಕೆ ಸರಕಾರದಿಂದ ಅನುದಾನ ಪಡೆಯಲು ಪ್ರಯತ್ನ ನಡೆಸಲಾಗುತಿದೆ. ಈ ಕುರಿತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸುನಿಲ್‍ಕುಮಾರ್ ಅವರ ಜೊತೆ ಚರ್ಚೆ ನಡೆಸಲಾಗಿದೆ. ದಸರಾ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭಕ್ಕೆ ಸಚಿವ ಸುನಿಲ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಒಂಭತ್ತು ದಿನಗಳ ವೈಭವದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಪ್ರತಿದಿನ ವೈದಿಕ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಉತ್ಸವದ ಸಮಾರೋಪದಂದು ವೈಭವದ ಶೋಭಾಯಾತ್ರೆ ನಡೆಯಲಿದ್ದು, ಹಲವು ಸಂಘ ಸಂಸ್ಥೆಗಳ ವತಿಯಿಂದ, ಇಲಾಖೆಗಳ ವತಿಯಿಂದ ಆಕರ್ಷಕ ಸ್ಥಬ್ದ ಚಿತ್ರಗಳು ಹಾಗು ಇತರ ಆಕರ್ಷಣೆಗಳು ಇರಲಿದೆ. ಎಂದು ಅವರು ಹೇಳಿದರು. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣ 2 ವರ್ಷಗಳಿಂದ ಶಾರದಾಂಭ ಉತ್ಸವ ಸರಳವಾಗಿ ನಡೆಸಲಾಗಿತ್ತು.ಈ ಬಾರಿ ವಿಜೃಂಭಣೆ ಮತ್ತು ಸಂಭ್ರಮ ಮರಳಿ ಬರಲಿದೆ.

ಶಾರದಾಂಬಾ ದಸರಾ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ ಶೋಭಾಯಾತ್ರೆಗೆ ಮೆರುಗು ನೀಡಲು ಸುಮಾರು 11 ಟ್ಯಾಬ್ಲೋಗಳು ಇರಲಿದೆ. ಇದು ಇನ್ನಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ವಿವಿಧ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ವತಿಯಿಂದ ಟ್ಯಾಬ್ಲೋ ಶೋಭಾಯಾತ್ರೆಯಲ್ಲಿ ಭಾಗವಜಿಸಲಿದೆ ಎಂದು ಅವರು ಹೇಳಿದರು. ಶಾರದಾಂಬಾ ಸೇವಾ ಸಮಿತಿಯ ಗೌರವ ಸಲಹೆಗಾರರಾದ ಡಾ. ಲೀಲಾಧರ ಡಿ.ವಿ, ಶಾರದಾಂಬಾ ಸೇವಾ ಅಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಗೌರವಾಧ್ಯಕ್ಷ ಕೆ.ಗೋಕುಲ್‍ದಾಸ್ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾರದಾಂಬಾ ದಸರ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಎಂ.ಕೆ. ಸತೀಶ್,ಉಪಾಧ್ಯಕ್ಷ ಬೂಡು ರಾಧಾಕೃಷ್ಣ ರೈ, ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಉಪಾಧ್ಯಕ್ಷರಾದ ಕೃಷ್ಣ ಬೆಟ್ಟ, ಜನಾರ್ಧನ ದೋಳ, ಕೋಶಾಧಿಕಾರಿ ಪ್ರದೀಪ್ ಕೆ.ಎನ್., ಹರೀಶ್ ಉಬರಡ್ಕ, ನಿರ್ದೇಶಕರಾದ ಮಂಜುನಾಥ ಬಳ್ಳಾರಿ, ಟ್ರಸ್ಟ್‍ನ ನಿರ್ದೇಶಕರಾದ ತೀರ್ಥರಾಮ ಜಾಲ್ಸೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.