ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಸುರತ್ಕಲ್ ಅಕ್ರಮ ಟೋಲ್ ನಿಂದ ಬಿಡುಗಡೆ ಕೊಡಿಸಿ : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಸಂಸದರು, ಸಚಿವರು ನೀಡಿದ ಜೂನ್ 22 ರ ಅಂತಿಮ ಗಡುವು ದಾಟಿ ಮತ್ತೆ ತಿಂಗಳು ಕಳೆದಿದೆ. ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತ ಮತೀಯ ದ್ವೇಷದ ಕೊಲೆಗಳ ಉನ್ಮಾದದಲ್ಲಿ ಸುರತ್ಕಲ್ ಟೋಲ್ ತೆರವು ಸಹಿತ ಜನ ಸಾಮಾನ್ಯರ ಜ್ವಲಂತ ಸಮಸ್ಯೆಗಳನ್ನು ಮರೆಮಾಚುವ ಯತ್ನ ನಡೆಯುತ್ತಿದೆ‌. ಜನಪ್ರತಿನಿಧಿಗಳ ಇಂತಹ ರಾಜಕಾರಣವನ್ನು ಒಪ್ಪಲು ಸಾಧ್ಯವಿಲ್ಲ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಮೊದಲು ಸುರತ್ಕಲ್ ಅಕ್ರಮ ಟೋಲ್ ತೆರವುಗೊಳಿಸಿ ಜನತೆಯನ್ನು ಟೋಲ್ ಲೂಟಿಯಿಂದ ಬಿಡುಗಡೆಗೊಳಿಸಬೇಕು ಎಂದು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರನ್ನು ಆಗ್ರಹಿಸಿದೆ.

ಆರು ವರ್ಷಗಳ ಸತತ ಹೋರಾಟದ ಹೊರತಾಗಿಯೂ ತಾತ್ಕಾಲಿಕ ನೆಲೆಯಲ್ಲಿ ಸ್ಥಾಪನೆಗೊಂಡಿರುವ ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ಮುಂದುವರಿಯುತ್ತಿದೆ‌. ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಟೋಲ್ ಗೇಟ್ ತೆರವಿಗೆ ಹಲವು ಭರವಸೆಗಳನ್ನು‌ ನೀಡುತ್ತಾ ಬಂದಿದ್ದಾರೆ. ಹೆಜಮಾಡಿ ನವಯುಗ್ ಟೋಲ್ ಫ್ಲಾಜ಼ಾ ದೊಂದಿಗೆ ವಿಲೀನ ಗೊಳಿಸವ ಕುರಿತು 2018 ರಲ್ಲಿ ಅಧಿಕೃತ ನಿರ್ಧಾರ ಆಗಿದ್ದರೂ ಅದು ಇಲ್ಲಿಯವರಗೆ ಜಾರಿಯಾಗಿಲ್ಲ. ಈ ನಡುವೆ 2022 ರ ಆರಂಭದ ತಿಂಗಳುಗಳಲ್ಲಿ ಹೋರಾಟ ತೀವ್ರಗೊಂಡಾಗ ಮಂಗಳೂರು ಬಂದರಿನ ಒಳಭಾಗಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದರು. ಮಾರ್ಚ್ 22 ರಂದು ಸ್ವತಹ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಅಕ್ರಮ ಟೋಲ್ ಗೇಟ್ ಜೂನ್ 22 ಕ್ಕೆ ತೆರವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಅದೇ ಮಾತನ್ನು ಸಂಸದ, ಸಚಿವ, ಶಾಸಕರುಗಳು ಪುನರುಚ್ಚರಿಸಿದ್ದರು. ಆದರೆ ಈ ತೀರ್ಮಾನಗಳನ್ನು ಕಾರ್ಯಗತಗೊಳಿಸದೆ ಜನತೆಯನ್ನು ವಂಚಿಸಲಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ನಿರಾಸೆ, ಆಕ್ರೋಶಗಳು ತೀವ್ರ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಈ ಕುರಿತು ಸಭೆ ಸೇರಿದ್ದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಟೋಲ್ ತೆರವುಗೊಳ್ಳದಿದ್ದಲ್ಲಿ ಜುಲೈ ಕೊನೆಯಲ್ಲಿ ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಸುಂಕ ಸಂಗ್ರಹಕ್ಕೆ ತಡೆ ಒಡ್ಡುವುದಾಗಿ ಘೋಷಿಸಿತ್ತು‌. ಇದೆ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಸುರತ್ಕಲ್ ಟೋಲ್ ಕೇಂದ್ರವನ್ನು ತಲಪಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಜುಲೈ ತಿಂಗಳ ಮಧ್ಯ ಭಾಗದಲ್ಲಿ ಪ್ರಕಟನೆ ನೀಡಿದ್ದರು.

ಈ ನಡುವೆ ಜಿಲ್ಲೆಯಲ್ಲಿ ರಾಜಕೀಯ ಪ್ರೇರಿತ ಮತೀಯ ಕೊಲೆಗಳು ಸರಣಿಯಾಗಿ ನಡೆದಿದ್ದು, ಸಮಾಜದಲ್ಲಿ ಭೀತಿಯ ವಾತಾವರಣ ನೆಲೆಗೊಂಡಿದೆ. ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿ ಸಾರ್ವಜನಿಕ ಚಟುವಟಿಕೆಗಳನ್ನು ನಿರ್ಬಂಧಿಸಿದೆ. ಇದರಿಂದಾಗಿ ಪ್ರತಿಭಟನೆ, ಹೋರಾಟಗಳನ್ನು ನಡೆಸುವುದು ಅಸಾಧ್ಯವಾಗಿದೆ. ಆಳುವವರು, ಜನಪ್ರತಿನಿಧಿಗಳು ಇಂತಹ ಮತೀಯ ಉನ್ಮಾದದ ಸಂದರ್ಭವನ್ನು ಬಳಸಿಕೊಂಡು ಸುರತ್ಕಲ್ ಟೋಲ್ ಗೇಟ್ ಸಹಿತ ಜನ ಸಾಮಾನ್ಯರನ್ನು ಭಾದಿಸುವ ಜ್ವಲಂತ ಸಮಸ್ಯೆಗಳನ್ನು ಅಂಚಿಗೆ ತಳ್ಳಲು, ಮುಚ್ಚಿಹಾಕಲು ವ್ಯವಸ್ಥಿತವಾದ ಪಿತೂರಿ ನಡೆಸುತ್ತಿದ್ದಾರೆ. ಸರಕಾರ ನಡೆಸುವವರ ಇಂತಹ ಹುನ್ನಾರಗಳಿಗೆ ಬಲಿ ಬೀಳುವ ಪ್ರಶ್ನೆಯೆ ಇಲ್ಲ ಎಂದು ಹೇಳಿರುವ “ಟೋಲ್ ಗೇಟ್ ವಿರೋಧಿ ಹೋರಾಟಸಮಿತಿ” ನಿಷೇಧಾಜ್ಞೆ ಹಿನ್ನಲೆಯಲ್ಲಿ ಹೋರಾಟಗಳು ತಾತ್ಕಾಲಿಕವಾಗಿಯಷ್ಟೆ ಮುಂದೂಡಲ್ಪಟ್ಟಿದೆ. ಮತೀಯವಾದಿ ಕೊಲೆಗಡುಕ ರಾಜಕಾರಣದಿಂದ ಜ‌ನರನ್ನು ಹೆಚ್ಚು ಕಾಲ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಬೆಳ್ಳಾರೆಯಲ್ಲಿ ವ್ಯಕ್ತವಾಗಿರುವ ಆಕ್ರೋಶ ಜನಸಾಮಾನ್ಯರಲ್ಲಿ ಆಡಳಿತ ನಡೆಸುವವರ ನೀತಿಗಳ ವಿರುದ್ದ ಮಡುಗಟ್ಟಿರುವ ಅತೃಪ್ತಿಯ ಒಂದು ಸಣ್ಣ ಸೂಚನೆ. ಜನತೆಯನ್ನು ಭಾದಿಸುವ ಟೋಲ್ ಗೇಟ್, ನಿರುದ್ಯೋಗ ಸಹಿತ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಈ ಆಕ್ರೋಶ ಜನಪ್ರತಿನಿಧಿಗಳ ವಿರುದ್ದ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಗಿ ಸ್ಫೋಟಗೊಳ್ಳಲಿದೆ. ಆಗಸ್ಟ್ ಹದಿನೈದು ಸ್ವಾತಂತ್ರ್ಯ ದಿನಾಚರಣೆಯ ಮುನ್ನವೇ ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವ ನಿರ್ಧಾರವನ್ನು ಜಾರಿಗೊಳಿಸಬೇಕು, ಆ ಮೂಲಕ ಟೋಲ್ ಲೂಟಿಯಿಂದ ಜನತೆಗೆ ಸ್ವಾತಂತ್ರ್ಯವನ್ನು ಕೊಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ‌ ಘೆರಾವ್, ಸುಂಕ ಸಂಗ್ರಹಕ್ಕೆ ತಡೆ, ಟೋಲ್ ಗೇಟ್ ಮುಂಭಾಗ ಸಾವಿರಾರು ಜನರ ಸಾಮೂಹಿಕ ಧರಣಿಯಂತಹ ತೀವ್ರತರದ ಹೋರಾಟಗಳು ನಡೆಯಲಿವೆ ಎಂದು ಸಮಿತಿ ಎಚ್ಚರಿಸಿದೆ.

ಮುನೀರ್ ಕಾಟಿಪಳ್ಳ
ಸಂಚಾಲಕರು‌. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

Related Posts

Leave a Reply

Your email address will not be published.