ರಾಜ್ಯವನ್ನು ಚೋರ ಗುರು ಶಿಷ್ಯರು ಆಳುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸುರತ್ಕಲ್: “ರಾಜ್ಯದಲ್ಲಿ ಬಿಜೆಪಿ ಸರಕಾರ ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ ಎಂಬ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಕಂಟ್ರಾಕ್ಟರ್ ಅಸೋಷಿಯೇಷನ್ ಶಾಸಕರು 40% ಕಮಿಷನ್ ತಗೊಳ್ಳೋದನ್ನು ಒಪ್ಪಿಕೊಂಡಿದೆ. ಇವರದ್ದು ಬರೀ ಸುಳ್ಳುಗಳ ಸರಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಳ್ತಾ ಇದ್ದಾರೆ. ನರೇಂದ್ರ ಮೋದಿ ಅವರಿಂದ ಹಿಡಿದು ತಳಮಟ್ಟದ ನಾಯಕರವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ” ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸುರತ್ಕಲ್ ಜಂಕ್ಷನ್ ನಲ್ಲಿ ಮಂಗಳೂರು ಉತ್ತರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಸುಳ್ಳುಗಳ ವಿರುದ್ಧ ಸಮರ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡಿದ ಅವರು, “ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ. ರಾಜ್ಯದಲ್ಲಿ ಗುತ್ತಿಗೆದಾರರು ನೇಣು ಹಾಕ್ಕೊಳ್ತಾ ಇದ್ದಾರೆ. ಇವರ ಡಬಲ್ ಇಂಜಿನ್ ಸರಕಾರದಿಂದ ಜನರಿಗೆ ಭ್ರಷ್ಟಾಚಾರ ಭಾಗ್ಯ ಸಿಕ್ಕಿದೆಯೇ ಹೊರತು ಬೇರೇನೂ ಸಿಕ್ಕಿಲ್ಲ. ನಳಿನ್ ಕುಮಾರ್ ಕಟೀಲ್ ಅವರು ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂತ ಹೇಳಿ ಕಾಣೆಯಾಗಿದ್ದಾರೆ. ನಿಮಗೆ ನಾಚಿಕೆ ಆಗುವುದಿಲ್ಲವೇ ಕಟೀಲ್ ಆವರೇ, ನೀವು ಸರಕಾರಿ ಉದ್ಯೋಗ ಹರಾಜಿಗೆ ಇಟ್ಟಿಲ್ಲ ಅಂತ ನನ್ನೊಂದಿಗೆ ಚರ್ಚೆಗೆ ಬರುತ್ತೀರಾ? ತಾಕತ್ತಿದ್ದರೆ ಬನ್ನಿ” ಎಂದು ಸವಾಲು ಹಾಕಿದರು.
ಪ್ರಾಸ್ತಾವಿಕ ಮಾತನ್ನಾಡಿದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು, “ನಾನು ಈ ಭಾಗದ ಶಾಸಕನಾಗಿದ್ದಾಗ 62 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ನೂತನ ಮಾರುಕಟ್ಟೆ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಶಿಲಾನ್ಯಾಸ ನೆರವೇರಿಸಿದ್ದೆ. 11 ಕೋಟಿ ರೂಪಾಯಿ ವೆಚ್ಚದಲ್ಲಿ ಅರ್ಧ ಕಾಮಗಾರಿಯನ್ನೂ ಮಾಡಿ ಮುಗಿಸಿದ್ದೆ. ಆದರೆ ಇಂದು ಬಿಜೆಪಿ ಕುಟಿಲ ರಾಜಕೀಯಕ್ಕೆ ಬಲಿಯಾಗಿ ಕಾಮಗಾರಿ ಅರ್ಧಕ್ಕೇ ನಿಂತಿದೆ. ಈ ಭಾಗಕ್ಕೆ ಭರತ್ ಶೆಟ್ಟಿ ಅವರು ಶಾಸಕರಾದ ಬಳಿಕ ಮಾಡಿದ್ದೇನು ಗುತ್ತಿಗೆ ಪಡೆದುಕೊಂಡವರು ಇವರ ಕಮಿಷನ್ ಕೇಳಿ ಓಡಿಹೋಗಿದ್ದಾರೆ. ಸುರತ್ಕಲ್ ನಲ್ಲಿ ರಸ್ತೆ ಮೇಲ್ದರ್ಜೆಗೆ ಏರಿಸುವಾಗ ರಸ್ತೆಯಲ್ಲಿ ಮಲಗಿದ್ರು. ಇಲ್ಲಿರುವ ದೈವಸ್ಥಾನವನ್ನು ಬ್ಯಾರಿ ಒಡೆಯುತ್ತಾನೆ ಎಂದು ಅಪಪ್ರಚಾರ ಮಾಡಿದರು. ಆದರೆ ಬ್ಯಾರಿ ಒಂದು ಹೆಂಚು ಕೂಡಾ ಅಲ್ಲಾಡಿಸದೆ ರಸ್ತೆ ಕಾಮಗಾರಿ ನಡೆಸಿದ್ದಾನೆ” ಎಂದರು.
ಬೈಕಂಪಾಡಿ ಎಪಿಎಂಸಿಯಿಂದ ಗೋವಿಂದದಾಸ್ ಕಾಲೇಜ್ ತನಕ ಬೈಕ್ ರ್ಯಾಲಿ ನಡೆಯಿತು. ಪ್ರಿಯಾಂಕ್ ಖರ್ಗೆ ಅವರನ್ನು ಮೊಯಿದೀನ್ ಬಾವಾ ಬೈಕ್ ನಲ್ಲಿ ಕೂರಿಸಿ ತಾವೇ ರೈಡ್ ಮಾಡಿದರು. ಮುಂದೆ ಸುರತ್ಕಲ್ ಮಾರುಕಟ್ಟೆ ಮುಂಭಾಗದವರೆಗೆ ಪಾದಯಾತ್ರೆಯಲ್ಲಿ ನಾಯಕರು, ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಾಗಿಬಂದರು.
ವೇದಿಕೆಯಲ್ಲಿ ಭವ್ಯ ನರಸಿಂಹಮೂರ್ತಿ, ನಿಖೇತ್ ರಾಜ್ ಮೌರ್ಯ, ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ನವೀನ್ ಡಿಸೋಜ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಗುಲ್ಜಾರ್ ಬಾನು, ಮಮತಾ ಗಟ್ಟಿ, ಗಿರೀಶ್ ಆಳ್ವ, ಪ್ರತಿಭಾ ಕುಳಾಯಿ, ಅನಿಲ್ ಕುಮಾರ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಪುರುಷೋತ್ತಮ್ ಚಿತ್ರಾಪುರ, ಶಾಲೆಟ್ ಪಿಂಟೋ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಶಶಿಕಲಾ ಪದ್ಮನಾಭ, ಬಿ.ಕೆ. ತಾರಾನಾಥ್, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ಷರೀಫ್ ಚೊಕ್ಕಬೆಟ್ಟು, ಜಲೀಲ್ ಬದ್ರಿಯ, ಎಸ್ ಸಿ ಎಸ್ ಟಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕೋಡಿಕಲ್, ಅಬೂಬಕರ್ ಪ್ಯಾರಡೈಸ್, ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.
