ಕೊನೆಗೂ ‘ಸುರತ್ಕಲ್ ಟೋಲ್‌ಗೇಟ್’ ರದ್ದು
ಹೋರಾಟಗಾರರ ನಿರಂತರ ಹೋರಾಟಕ್ಕೆ ಮಣಿದಿರುವ ಕೇಂದ್ರ ಸರ್ಕಾರವು, ಕೊನೆಗೂ ಮಂಗಳೂರಿನ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ರದ್ದು ಮಾಡಿದೆ.
ಈ ಸಂಬಂಧ ಟ್ವಿಟರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ಹಂಚಿಕೊಂಡಿದ್ದು, “ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಸುರತ್ಕಲ್ ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿ ಕಳೆದ 17 ದಿನಗಳಿಂದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ.
“ಟೋಲ್ ತೆರವು ಹೋರಾಟ ಗೆಲುವಿನ ಸನಿಹ ತಲುಪಿದೆ. ಬಾಯಿ ಮಾತು, ಟ್ವೀಟ್, ಪೋಸ್ಟ್‌ಗಳನ್ನು ನಂಬಿ ಹಗಲು ರಾತ್ರಿ ಧರಣಿ ನಿಲ್ಲಿಸಲಾರೆವು. ಅಧಿಕೃತ ಆದೇಶ ಕೈ ಸೇರಿ, ಅಕ್ರಮ ಟೋಲ್‌ನಲ್ಲಿ ಸಂಗ್ರಹ ಸ್ಥಗಿತಗೊಂಡ ಮೇಲಷ್ಟೆ ಹಗಲು ರಾತ್ರಿ ಧರಣಿ ಮುಕ್ತಾಯಗೊಳ್ಳುತ್ತದೆ” ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.