ಸುರತ್ಕಲ್ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಸಭೆ

ಸುರತ್ಕಲ್ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಸಭೆ : “ಒಂದು ತಿಂಗಳಲ್ಲಿ ಟೋಲ್ ಗೇಟ್ ತೆರವುಗೊಳ್ಳುತ್ತದೆ” ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಹೇಳಿಕೆ ಹಾಗೂ ಒಂದು ವರ್ಷ ಅವಧಿಗೆ ಟೋಲ್ ಸಂಗ್ರಹ ಗುತ್ತಿಗೆ ನವೀಕರಣ ಗೊಂಡಿರುವ ವಿಚಾರಗಳ ಕುರಿತು ವಿಷದವಾಗಿ ಚರ್ಚಿಸಲಾಯಿತು. ಟೋಲ್ ತೆರವಿಗೆ ಅಧಿಕೃತ ದಿನಾಂಕ ಘೋಷಿಸದೆ ಕೇವಲ ಬಾಯ್ಮಾತಿನ ಭರವಸೆಗಳನ್ನು ಹಿಂದಿನ ಅನುಭವಗಳ ಆಧಾರದಲ್ಲಿ ನಂಬಲು‌ ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.‌ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಆಧಿಕೃತವಾಗಿ ಘೋಷಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಸೆಪ್ಟಂಬರ್ 13 ರಂದು ಟೋಲ್ ಗೇಟ್ ಮುಂಭಾಗ ಸಾಮೂಹಿಕ ಧರಣಿ ನಡೆಸುವುದು, ಆ ಸಂದರ್ಭದಲ್ಲಿಯೂ ಟೋಲ್ ತೆರವಿನ ದಿನಾಂಕ ಪ್ರಕಟಿಸದಿದ್ದಲ್ಲಿ ಸೆಪ್ಟಂಬರ್ ಕೊನೆಯಲ್ಲಿ ಟೋಲ್ ಗೇಟ್ ಗೆ ಬೃಹತ್ ಮುತ್ತಿಗೆ ಹಾಕುವ ದಿನಾಂಕ ವನ್ನು ಸಾಮೂಹಿಕ ಧರಣಿಯಲ್ಲಿ ಸಹಭಾಗಿ ಸಂಘಟನೆಗಳ ಸಭೆ ನಡೆಸಿ ಘೋಷಿಸುವುದು ಎಂದು ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಮ್ ಜಿ ಹೆಗ್ಡೆ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕರುಗಳಾದ ಉದ್ಯಮಿ ವೈ ರಾಘವೇಂದ್ರ ರಾವ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಟಿ ಎನ್ ರಮೇಶ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ದಲಿತ ಸಂಘರ್ಷ ಸಮಿತಿಯ ನೇತಾರರುಗಳಾದ ಎಂ ದೇವದಾಸ್, ರಘು ಎಕ್ಕಾರು, ಲಾರಿ ಮಾಲಕರ ಸಂಘದ ಉಪಾಧ್ಯಕ್ಷರಾದ ಮೂಸಬ್ಬ ಪಕ್ಷಿಕೆರೆ, ಮೂಲ್ಕಿ‌ ತಾಲೂಕು ಅಭಿವೃದ್ದಿ ಸಮಿತಿಯ ವಸಂತ ಬರ್ನಾಡ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ಮೂಲ್ಕಿ ನಗರ ಸಭೆ ಸದಸ್ಯರಾದ ಯೋಗೀಶ್ ಕೋಟ್ಯಾನ್, ಹೆಜಮಾಡಿ ನಾಗರಿಕ ಸಮಿತಿ ಪ್ರಮುಖರೂ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಲ್ಫಿ ಡಿ ಕೋಸ್ತಾ, ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ದಿನೇಶ್ ಕುಂಪಲ, ವಿವಿಧ ಸಂಘಟನೆಗಳ ಪ್ರಮುಖರಾದ ರಾಜೇಶ್ ಶೆಟ್ಟಿ ಪಡ್ರೆ, ಸುಧೀರ್ ಹೆಜಮಾಡಿ, ಗೌತಮ್ ಹೆಗ್ಡೆ, ರಾಜೇಶ್ ಪೂಜಾರಿ ಕುಳಾಯಿ, ನಿಸಾರ್ ಬಜ್ಪೆ, ರಶೀದ್ ಮುಕ್ಕ, ಅಶೋಕ್ ಪೂಜಾರ್ ಮುಲ್ಕಿ, ರಿತೇಶ್ ಸಸಿಹಿತ್ಲು ಹಾಜರಿದ್ದರು.

Related Posts

Leave a Reply

Your email address will not be published.