ಟೋಲ್‍ಗೇಟ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ
ಸುರತ್ಕಲ್ ಅಕ್ರಮ ಟೋಲ್‍ಗೇಟ್ ತೆರವಿಗೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವೃತೆಯಿಂದ ಮುಂದುವರೆಸುತ್ತೇವೆ. ನಾಳೆಯೇ ಹೋರಾಟ ಸಮಿತಿಯ ಸಭೆ ಸೇರಿ ಮುಂದಿನ ಹೋರಾಟವನ್ನು ನಿರ್ಧರಿಸುತ್ತೇವೆ. ಟೋಲ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ ಎಂದು ಟೋಲ್‍ಗೇಟ್ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅವರು ಈ ಪ್ರತಿಕ್ರಿಯೆ ನೀಡಿ ಟೋಲ್‍ಗೇಟ್‍ಗೆ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ನಿಸ್ವಾರ್ಥವಾಗಿ ಬಿಡುಗಡೆಗೊಳಿಸಿದ್ದಾರೆ. ಜಾಮೀನು ಕೇಳದೆ ಇರುವುದರಿಂದ ಅದನ್ನು ತಿರಸ್ಕರಿಸಿ ಜೈಲಿಗೆ ಹೋಗುವ ನಮ್ಮ ನಿರ್ಧಾರ ತಪ್ಪಿದಂತಾಯಿತು. ಇಂದು ಖಂಡಿತವಾಗಿಯೂ ಬಿಜೆಪಿ ಮತ್ತದರ ಸರ್ವಶಕ್ತಿ ನಮ್ಮ ಜನಗಳ ಇಚ್ಚಾಶಕ್ತಿಯ ಹೋರಾಟದ ಎದುರು ಸೋತಿದೆ. ಬಿಜೆಪಿ ಸರಕಾರದ ಪೆÇಲೀಸರ ಎಲ್ಲಾ ಬೆದರಿಕೆ, ದೌರ್ಜನ್ಯ, ಸರ್ಪಗಾವಲು, ಬಲಪ್ರಯೋಗಗಳನ್ನು ಹಿಮ್ಮೆಟ್ಟಿಸಿ ನಾವಿಂದು ಟೋಲ್ ಗೇಟ್ ತಲುಪಿದ್ದೇವೆ. ಒಂದಿಷ್ಟು ಗಂಟೆಗಳ ಕಾಲ ಟೋಲ್ ಸಂಗ್ರಹ ಸ್ಥಗಿತಗೊಳಿಸಿದ್ದೇವೆ. ಆ ಮೂಲಕ ಬಿಜೆಪಿ ಶಾಸಕರುಗಳ ಸರ್ವಾಧಿಕಾರಕ್ಕೆ ಸವಾಲು ಒಡ್ಡಿದ್ದೇವೆ. ಇದು ತುಳುನಾಡು ಒಗ್ಗಟ್ಟಿನಿಂದ ನಿಂತಿರುವ ಫಲ. ಈ ಗೆಲುವು ಸರ್ವರಿಗೂ ಸಲ್ಲುತ್ತದೆ. ಮತ್ತೆ ನಾಳೆ ಹೋರಾಟ ಸಮಿತಿ ಸಭೆ ಸೇರಿ ತೀರ್ಮಾನ ಪ್ರಕಟಿಸುತ್ತೇವೆ. ಟೋಲ್ ಸ್ಥಗಿತಗೊಳ್ಳುವವರೆಗೂ ವಿರಾಮ ಇಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿದರು.