ಸುರತ್ಕಲ್ ಟೋಲ್ ಗೇಟ್ ರದ್ದು ಬದಲು ವಿಲೀನ! ಹೆದ್ದಾರಿ ಪ್ರಾಧಿಕಾರದ ನಾಟಕೀಯ ಆದೇಶ, ಹೆಜಮಾಡಿಯಲ್ಲಿ ಕಟ್ಟಬೇಕು ಡಬಲ್ ಶುಲ್ಕ

ಮಂಗಳೂರು, : ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟ ನಡೆಸಿದ್ದ ಜನಸಾಮಾನ್ಯರಿಗೆ ಮತ್ತೆ ಕುತ್ತಿಗೆ ಹಿಡಿಯುವ ರೀತಿಯ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನ.11ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು ನಂತೂರಿನಿಂದ ಸುರತ್ಕಲ್ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲು ಆದೇಶ ನೀಡಿದೆ.

ತಲಪಾಡಿಯಿಂದ ಕುಂದಾಪುರದ ವರೆಗಿನ ರಸ್ತೆಯನ್ನು ನವಯುಗ ಸಂಸ್ಥೆಯು ಮಾಡಿದ್ದು, ಇದಕ್ಕಾಗಿ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇದರ ಮಧ್ಯೆ ಇರುವ 17 ಕಿಮೀ ಉದ್ದದ ಪಡೀಲ್- ನಂತೂರು-  ಸುರತ್ಕಲ್ ಎನ್ಐಟಿಕೆ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲಿ ಸಂಗ್ರಹಿಸಲು ಹೊಸ ಆದೇಶದಲ್ಲಿ ತಿಳಿಸಲಾಗಿದೆ. ಇದರಂತೆ, ಹೆಜಮಾಡಿಯಲ್ಲಿ ಈಗಾಗಲೇ ಕಾರು ಇನ್ನಿತರ ಸಾಮಾನ್ಯ ವಾಹನಗಳಿಗೆ 45 ರೂ. ಇದ್ದು, ಹೆಚ್ಚುವರಿಯಾಗಿ 45 ರೂ. ಸೇರ್ಪಡೆಯಾಗುವ ಸಾಧ್ಯತೆಯಿದೆ. ಕಾರು ಪ್ರಯಾಣಿಕರು ಅಂದಾಜು 80ರಂದ 90 ರೂ. ತೆತ್ತು ಹೆಜಮಾಡಿ ಟೋಲ್ ಗೇಟ್ ದಾಟಬೇಕಾಗುತ್ತದೆ.

ರಿಯಾಯ್ತಿ ದರವೂ ಇಲ್ಲ

ಇದಲ್ಲದೆ, ಈಗಾಗಲೇ ಸುರತ್ಕಲ್ ಟೋಲ್ ಗೇಟ್ ನಲ್ಲಿದ್ದ ಮಂಗಳೂರು ನೋಂದಣಿಯ ಕೆಎ -19 ಸಂಖ್ಯೆಯ ವಾಹನಗಳ ರಿಯಾಯ್ತಿಯನ್ನು ಕಡಿತ ಮಾಡಲಾಗಿದೆ. ಹೆಜಮಾಡಿ ಟೋಲ್ ನಲ್ಲಿ ಎಲ್ಲ ಮಾದರಿಯ ವಾಹನಗಳು ಕೂಡ ಸುರತ್ಕಲ್ ನಲ್ಲಿ ನೀಡುತ್ತಿದ್ದ ಶುಲ್ಕವನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಹೆದ್ದಾರಿ ಪ್ರಾಧಿಕಾರದ ಆದೇಶದಲ್ಲಿ ಸ್ಪಷ್ಟವಾಗಿ ಸುರತ್ಕಲ್ ಟೋಲ್ ಗೇಟ್ ಸ್ಥಗಿತ ಅಥವಾ ತೆರವುಗೊಳ್ಳುವ ಬಗ್ಗೆ ಉಲ್ಲೇಖ ಮಾಡಿಲ್ಲ. ಹೆಚ್ಚುವರಿಯಾಗಿ 17 ಕಿಮೀ ಉದ್ದದ ಸುರತ್ಕಲ್ – ನಂತೂರು ರಸ್ತೆಯ ನಿರ್ವಹಣೆಯ ಶುಲ್ಕವನ್ನು ನವಯುಗ ಕಂಪನಿಯವರು ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಆಮೂಲಕ ಸುರತ್ಕಲ್ ಟೋಲ್ ಗೇಟ್ ರದ್ದುಗೊಂಡರೂ, ಹೆಜಮಾಡಿ- ಮುಲ್ಕಿ ಭಾಗದ ಪ್ರಯಾಣಿಕರು ಮತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುವ ಎಲ್ಲ ಮಾದರಿಯ ವಾಹನ ಸವಾರರು ಡಬಲ್ ಶುಲ್ಕ ತೆರಬೇಕಾಗುತ್ತದೆ.

ಕಳೆದ ಆರು ವರ್ಷಗಳಿಂದಲೂ ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂದು ಸ್ಥಳೀಯರು ಸೇರಿದಂತೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿಕೊಂಡು ಬಂದಿದ್ದಾರೆ. ಕೇವಲ 45 ಕಿಮೀ ಅಂತರದಲ್ಲಿ ಜನರು ತಲಪಾಡಿಯಿಂದ ಹೆಜಮಾಡಿಗೆ ಹೋಗಲು ಮೂರು ಕಡೆ ಶುಲ್ಕ ಕಟ್ಟಬೇಕಾದ ಸ್ಥಿತಿ ಇದೆ. ಇಂಥ ಹಗಲು ದರೋಡೆಯನ್ನು ತಪ್ಪಿಸಲು ನಿರಂತರ ಪ್ರತಿಭಟನೆ ನಡೆಸಿಕೊಂಡು ಬರಲಾಗಿತ್ತು. ಈಗ ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ 17 ದಿನಗಳಿಂದ ರಾತ್ರಿ ಹಗಲು ಧರಣಿ ನಡೆಸುತ್ತಿದ್ದಾರೆ. ಆದರೆ ಹೆದ್ದಾರಿ ಪ್ರಾಧಿಕಾರ ಈ ಭಾಗದ ಜನಪ್ರತಿನಿಧಿಗಳು, ಜನರ ಹಕ್ಕೊತ್ತಾಯಕ್ಕೆ ಕೇರ್ ಎಂದಿಲ್ಲ. ಬದಲಿಗೆ, ನೇರವಾಗಿ ಸುರತ್ಕಲ್ ನಲ್ಲಿ ನೀಡುತ್ತಿದ್ದ ಶುಲ್ಕವನ್ನು ಹೆಜಮಾಡಿಯಲ್ಲಿ ವಿಲೀನಗೊಳಿಸಿ ಗಾಯದ ಮೇಲೆ ಬರೆ ಎಳೆದಿದೆ.

ವಸ್ತುಸ್ಥಿತಿ ಹೀಗಿದ್ದರೂ, ಸಂಸದ ನಳಿನ್ ಕುಮಾರ್ ಮಾತ್ರ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಿದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಹೊಸ ಆದೇಶ ಕರಾವಳಿಯಲ್ಲಿ ವಿಪಕ್ಷಗಳ ಪಾಲಿಗೆ ಹೊಸ ಅಸ್ತ್ರವನ್ನು ಕೊಟ್ಟಂತಾಗಿದೆ. 

ವಿಲೀನ ಮಾಡಿದರೆ ಪ್ರತಿಭಟನೆ ಹೆಜಮಾಡಿಗೆ ಶಿಫ್ಟ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸುರತ್ಕಲ್ ಟೋಲ್ ಗೇಟ್ ರದ್ದಾಗುವ ಬದಲು ಅದನ್ನು ಹೆಜಮಾಡಿಯಲ್ಲಿ ವಿಲೀನ ಮಾಡಲು ಮುಂದಾದರೆ, ನಮ್ಮ ಹೋರಾಟ ಅಲ್ಲಿಗೆ ಸ್ಥಳಾಂತರ ಆಗಲಿದೆ. ನಾವು ಯಾವುದೇ ಕಾರಣಕ್ಕೂ ಅಲ್ಲಿ ವಿಲೀನಗೊಳ್ಳುವುದನ್ನು ಒಪ್ಪುವುದಿಲ್ಲ. ಅದಲ್ಲದೆ, ಒಂದ್ವೇಳೆ ವಿಪರೀತ ಎನ್ನುವ ರೀತಿ ಹೆಚ್ಚುವರಿ ದರ ವಸೂಲಿ ಮಾಡಿದರೂ ನಾವು ಒಪ್ಪಲ್ಲ. ಹೊಸ ಆದೇಶದ ಬಗ್ಗೆ ತಿಳಿದುಕೊಂಡು ಮಂಗಳವಾರ ಬೆಳಗ್ಗೆ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

 

Related Posts

Leave a Reply

Your email address will not be published.