ಸುರತ್ಕಲ್‌ ಟೋಲ್‌ಗೇಟ್‌ ತೆರವುಗೊಳಿಸಲು ಸಾಧ್ಯವಾಗದ ಸಂಸದರು ಜನಪ್ರತಿನಿಧಿಯಾಗಲು ಅರ್ಹರಲ್ಲ: ಐವನ್‌ ಡಿಸೋಜಾ

ಸುರತ್ಕಲ್, ನ.೮: ದೇಶದಲ್ಲಿ ೩೬ ಅಕ್ರಮ ಟೋಲ್‌ಗೇಟ್‌ಗಳಿರುವುದನ್ನು ಒಪ್ಪಿಕೊಂಡಿರುವ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿಯವರೇ ತೆರವುಗೊಳಿಸಲಾಗುವುದು ಎಂದು ಲೋಕಸಭೆಯಲಿ ಹೇಳಿದ ಬಳಿಕವೂ ಸಂಸದರಾಗಿ ಸುರತ್ಕಲ್ ಅಕ್ರಮ ಟೋಲ್‌ಗೇಟ್ ತೆರವುಗೊಳಿಸಲು ಸಾಧ್ಯವಾಗದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಜನಪ್ರತಿನಿಧಿಯಾಗಿರಲು ಅರ್ಹರಲ್ಲ ಎಂದು ಐವನ್ ಡಿಸೋಜಾ ಹೇಳಿದರು.
ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿರುವ ರಾತ್ರಿ- ಹಗಲು ಅನಿರ್ಧಿಷ್ಟಾವಧಿ ಧರಣಿಗೆ ಟೆಂಪೊ ಚಾಲಕ ಮಾಲಕರ ಬೃಹತ್ ರ್ಯಾಲಿಯ ಜೊತೆ ಆಗಮಿಸಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡುತ್ತಿದ್ದರು.
ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು ಎಲ್ಲರೂ ಇದು ಅಕ್ರಮ ಟೋಲ್‌ಗೇಟ್ ಎಂದು ಒಪ್ಪಿಕೊಂಡಿದ್ದಾರೆ. ಸಭೆಗಳನ್ನು ಪೌರುಷದಿಂದಲೇ ಮಾತನಾಡುತ್ತಿದ್ದ ನಳಿನ್ ಕುಮಾರ್, ನಾನೇ ಟೋಲ್ ಮುಚಿಸುತ್ತೇನೆ, ಯಾರೂ ಟೋಲ್ ಕೊಡಬೇಡಿ ಎಂದು ಹೇಳಿದ್ದಾರೆ. ಅದು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ಮೊಯ್ದಿನ್ ಬಾವ, ಪುರುಷೋತ್ತಮ ಚಿತ್ರಾಪುರ, ಬಿ.ಕೆ. ಇಮ್ತಿಯಾಝ್, ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಕೆ.ಎ. ಅಶ್ರಫ್ ಸೇರಿದಂತೆ ಹಲವರು ಮಾತನಾಡಿದರು. ವಿವಿಧ ಸಂಘಟನೆಗಳ ೫೦೦ಕ್ಕೂ ಮಿಕ್ಕಿ ಸಮಾನ ಮನಸ್ಕರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಗೂ ಮುನ್ನ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ಮಂಗಳೂರು ನಗರ ಭಾಗದ ಟೆಂಪೊ ಚಾಲಕ ಮಾಲಕರು ತಮ್ಮ ಟೊಂಪೊಗಳ ಮೂಲಕ ಬೃಹತ್ ಜಾಥಾ ನಡೆಸಿ ಧರಣಿಯ ಸಭೆಗೆ ಸೇರಿಕೊಂಡರು.

Related Posts

Leave a Reply

Your email address will not be published.